ವಿದ್ಯಾಪೋಷಕ್ ವಿದ್ಯಾರ್ಥಿ -ಪೋಷಕರ ಸಮಾವೇಶ

ಉಡುಪಿ, ಆ.25: ಐವತ್ತು ವರ್ಷಗಳ ಹಿಂದೆ ಹೆಣ್ಣುಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಿದ್ದ ಕಾಲದಲ್ಲಿ ಡಾ.ಟಿ.ಎಂ.ಎ.ಪೈ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ಹುಡುಗಿಯರ ಶಿಕ್ಷಣಕ್ಕೆ ಮಹತ್ತ ಕೊಟ್ಟಿದ್ದರು. ಯಕ್ಷಗಾನ ಕಲಾ ರಂಗ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಮನೆ ಭೇಟಿ ಮಾಡಿ ಆಯ್ಕೆ ಮಾಡುವ ಕ್ರಮ, ಮನೆ ನಿರ್ಮಾಣವು ಸೇರಿದಂತೆ ಆ ಕುಟುಂಬದ ಎಲ್ಲಾ ಸಂಕಷ್ಟಗಳಿಗೆ ಸ್ಪಂಧಿಸುವ ರೀತಿ ಅದ್ಭುತ ಎಂದು ಮಣಿಪಾಲ ಡಾ.ಟಿ.ಎಂ.ಎ.ಪೈ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಟಿ.ಅಶೋಕ್ ಪೈ ಹೇಳಿದ್ದಾರೆ.
ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಲಾದ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ಗೆ ಈ ವರ್ಷ ಆಯ್ಕೆಗೊಂಡ ಪ್ರಥಮ ಪಿ.ಯು ವಿದ್ಯಾರ್ಥಿಗಳ ಮತ್ತು ಹೆತ್ತವರ ಒಂದು ದಿನದ ಸಮಾ ಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕೃಷ್ಣಪ್ರಸಾದ್ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಮಾಲಕ ಸಂಪತ್ ಕುಮಾರ್ ಶೆಟ್ಟಿ ಮಾತನಾಡಿ, ಕೇವಲ ಕನಸು ಕಾಣುತ್ತಾ ಕುಳಿತರೆ ನಮ್ಮ ಉದ್ದೇಶಿತ ಗುರಿಯನ್ನು ಸಾಧಿಸಲು ಸಾಧ್ಯವಾಗದು. ಅದಕ್ಕೆ ನಿರಂತರ ಪರಿಶ್ರಮ ಬೇಕು ಎಂದು ಹೇಳಿದರು.
ಉದ್ಯಮಿ ಪುರುಷೋತ್ತಮ ಪಿ.ಶೆಟ್ಟಿ, ಯು.ಎಸ್.ನಾಯಕ್ ಚಾರಿಟೇಬಲ್ ಟ್ರಸ್ಟ್‌ನ ಸಿಎ ಸುರೇಶ ನಾಯಕ್, ಮಲ್ನಾಡ್ ಕ್ಯಾಶ್ಯೂವಿನ ಎಚ್.ನಾಗರಾಜ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಡಾ.ಸುದರ್ಶನ ಮೂರ್ತಿ ಮತ್ತು ಡಾ.ಲಕ್ಷ್ಮೀ ಎಸ್.ಮೂರ್ತಿ ಮಾರ್ಗದರ್ಶಿ ಮಾತುಗಳನ್ನಾಡಿದರು. ಹುಬ್ಬಳ್ಳಿಯ ಮೈ ಲೈಫ್ ಸಂಸ್ಥೆಯ ಸ್ಥಾಪಕ ಪ್ರವೀಣ್ ಗುಡಿ ಮಾತನಾಡಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಪಿ.ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ.ಸದಾಶಿವ ರಾವ್, ಸದಸ್ಯರು ಗಳಾದ ಯು.ವಿಶ್ವನಾಥ ಶೆಣೈ, ಯು.ಎಸ್.ರಾಜಗೋಪಾಲ ಆಚಾರ್ಯ, ವಿಜಯ ಕುಮಾರ ಮುದ್ರಾಡಿ, ಭುವನ ಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ನಿರಂಜನ ಭಟ್, ಮರ್ಣೆ ಉಮೇಶ ಭಟ್, ಗಣೇಶ್ ರಾವ್ ಎಲ್ಲೂರು, ಅಶೋಕ್ ಎಂ., ನಟರಾಜ ಉಪಾಧ್ಯಾಯ, ಸಂತೋಷ ಕುಮಾರ್ ಶೆಟ್ಟಿ, ಪ್ರಭಾಕರ ಭಂಡಿ, ಡಾ.ಪ್ರತಿಮಾ ಜೆ.ಆಚಾರ್ಯ, ಡಾ.ರಾಘವೇಂದ್ರ ರಾವ್, ಆರ್.ವಸಂತ, ರಂಜಿನಿ ವಸಂತ, ತಾರಾದೇವಿ, ನಾಗರಾಜ ಹೆಗಡೆ ಉಪಸ್ಥಿತರಿದ್ದರು.
ಈ ವರ್ಷ ವಿದ್ಯಾಪೋಷಕ್ಗೆ ಕನ್ನಡ ಮಾಧ್ಯಮದಲ್ಲಿ ಓದಿ ಶೇ.80ಕ್ಕಿಂತಲೂ ಅಧಿಕ ಅಂಕ ಪಡೆದ ಒಟ್ಟು 652 ಅರ್ಜಿಗಳು ಬಂದಿದ್ದು ಅದರಲ್ಲಿ ಆಯ್ಕೆಗೊಂಡ 291 ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.






