ಪ್ರಧಾನಮಂತ್ರಿಗಳ ಜೊತೆ ’ಖೇಲೋ ಇಂಡಿಯಾ’ ಸಂವಾದ

ಉಡುಪಿ, ಆ.27: ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ವಿಭಾಗದ ಸಹಭಾಗಿತ್ವದಲ್ಲಿ ಕೇಂದ್ರ ಸರಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್, ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸಿದ ಪ್ರಧಾನಮಂತ್ರಿಗಳ ’ಖೇಲೋ ಇಂಡಿಯಾ’ ಸಂವಾದದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯು ಭಾಗವಹಿಸಿತು.
ಈ ಸಂವಾದಕ್ಕೆ ’ಎ ಕೆಟಗರಿ’ಯಲ್ಲಿ ಆಯ್ಕೆಯಾದ ಉಡುಪಿ ಜಿಲ್ಲೆ ಹಾಗೂ ಮಂಗಳೂರು ವಿವಿಯ ಏಕೈಕ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ ಎಂಬ ಹೆಗ್ಗಳಿಕೆಗೆ ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಪಾತ್ರವಾಗಿದೆ. ಕಾಲೇಜಿನ ಸುಮಾರು 350 ವಿದ್ಯಾರ್ಥಿಗಳು ಈ ಸಂವಾದದಲ್ಲಿ ಭಾಗವಹಿಸಿ, ಪ್ರಧಾನಮಂತ್ರಿಗಳ ಭಾಷಣ ಆಲಿಸುವ ಕಾರ್ಯಕ್ರಮದಲ್ಲಿ ಭಾಗಿಯಾದರು.
ಪ್ರಧಾನ ಮಂತ್ರಿಗಳ ಭಾಷಣದ ತರುವಾಯ ಉಡುಪಿಯ ರಾಷ್ಟ್ರಮಟ್ಟದ ಕ್ರೀಡಾಪಟು ಸ್ತುತಿ ಪಿ.ಶೆಟ್ಟಿ ಜೊತೆ ಕಾಲೇಜಿನ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಕಾಲೇಜಿನ ಪರವಾಗಿ ಕ್ರೀಡಾಪಟು ಸ್ತುತಿ ಪಿ.ಶೆಟ್ಟಿಯವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಶಾ ಮುಕ್ತ ಅಭಿಯಾನಯ ಪ್ರತಿಜ್ಞೆ ಸ್ವೀಕರಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಗಾಯತ್ರಿ ಪೈ, ಉಪಪ್ರಾಂಶುಪಾಲ ಡಾ. ಎಂ.ವಿಶ್ವನಾಥ ಪೈ, ಎನ್‌ಎಸ್‌ಎಸ್ ಅಧಿಕಾರಿಗಳಾದ ಸುಚಿತ್ ಕೋಟ್ಯಾನ್, ಡಾ.ರೇಖಾ ಎನ್.ಚಂದ್ರ, ಉಡುಪಿ ಮೈ ಭಾರತ್ ಕೇಂದ್ರದ ಶ್ಯಾಮಲಾ, ಎನ್‌ಐಸಿ ಉಡುಪಿಯ ಗೌತಮ್, ಕಾಲೇಜಿನ ಪ್ರಾಧ್ಯಾಪಕರು, ಎನ್‌ಎಸ್‌ಎಸ್ ಸ್ವಯಂಸೇವಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನಘಾ ಮೇಲಂಟ, ಪ್ರಾಪ್ತಿ ಶೆಟ್ಟಿ ಹಾಗೂ ದೀಪಕ್ ಹೆಗ್ಡೆ ಸಂವಹನದ ನೇತೃತ್ವ ವಹಿಸಿದ್ದರು.






