ಶೋಷಿತರು ಸಮಾಜದ ಮುಖ್ಯವಾಹಿನಿಗೆ ಬರುವುದನ್ನು ಆರೆಸ್ಸೆಸ್ ಒಪ್ಪಲ್ಲ: ಸುಧೀರ್ ಕುಮಾರ್

ಕುಂದಾಪುರ, ಆ.27: ಶೋಷಿತ ಸಮುದಾಯದ ಜನರು ಸಮಾಜದ ಮುಖ್ಯ ವಾಹಿನಿಗೆ ಬರುವುದನ್ನು ಬಿಜೆಪಿ, ಆರೆಸ್ಸೆನವರು ಒಪ್ಪುವುದಿಲ್ಲ ಎಂಬುದು ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಜಾಗವನ್ನು ಶುದ್ಧೀಕರಣ ಮಾಡಿರುವುದರಿಂದ ಸ್ಪಷ್ಟವಾಗಿದೆ. ಇದು ಅವರಲ್ಲಿರುವ ಮನೋರೋಗವನ್ನು ತೋರಿಸುತ್ತದೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಸುಧೀರ್ ಕುಮಾರ್ ಮರೋಳಿ ಟೀಕಿಸಿದ್ದಾರೆ.
ಉತ್ತರಾಖಂಡದ ರಾಮ್ ಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ಜಾಗವನ್ನು ಗಂಗಾಜಲ ಹಾಕಿ ಶುದ್ಧೀಕರಿಸಿದನ್ನು ಖಂಡಿಸಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಗುರುವಾರ ಹಮ್ಮಿಕೊಳ್ಳಲಾದ ಪ್ರತಿಭಟನೆ ಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಇದು ಮಾನವೀಯತೆಯ ವಿರುದ್ದದ ನಡೆಯೆಂದು ಇಲ್ಲಿನ ಶಾಸಕರು, ಸಂಸದರು ಯಾಕೆ ಹೇಳಿಕೆ ಕೊಟ್ಟಿಲ್ಲ? ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇದ್ದಿದ್ದರೆ ಖಂಡಿಸುತ್ತಿದ್ದರು. ಆದರೆ ಸ್ಥಳೀಯ ಯಾವ ಬಿಜೆಪಿ ನಾಯಕರು ಕೂಡ ಇದನ್ನು ಖಂಡಿಸುವ ಪ್ರಯತ್ನ ಮಾಡಿಲ್ಲ. ಇವರೆಲ್ಲ ಮನುಷ್ಯತ್ವ, ಸಂವಿಧಾನ ಹಾಗೂ ಒಂದು ವರ್ಗದ ಜನರ ವಿರೋಧಿಗಳು ಎಂದ ಅವರು, ಯಾರೇ ಆಗಲಿ ಪತ್ರಕರ್ತರ ಮೇಲೆ ದಾಳಿ ನಡೆಸುವುದು ಸರಿಯಲ್ಲ. ಕಾಂಗ್ರೆಸ್ ಇದನ್ನು ಎಂದಿಗೂ ಸಹಿಸಲ್ಲ ಎಂದರು.
ದಲಿತ ಸಂಘರ್ಷ ಸಮಿತಿ ಮುಖಂಡರಾದ ಮಂಜುನಾಥ ಗಿಳಿಯಾರ್, ರಾಜು ಬೆಟ್ಟಿನಮನೆ, ಜಗದೀಶ್ ಗಂಗೊಳ್ಳಿ, ಗಣೇಶ್ ಕೊರಗ, ಅಶ್ವಥ್ ಕುಮಾರ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆದೂರು ಸದಾನಂದ ಶೆಟ್ಟಿ, ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ವಿನೋದ್ ಕ್ರಾಸ್ತ, ದೇವಕಿ ಸಣ್ಣಯ್ಯ, ಆಶಾ ಕರ್ವಾಲೋ, ಜ್ಯೋತಿ ಪುತ್ರನ್, ಇಚ್ಚಿತಾರ್ಥ್ ಶೆಟ್ಟಿ, ರೋಶನ್ ಶೆಟ್ಟಿ, ಅಶ್ವಥ್ ಶೆಟ್ಟಿ, ನಾಗೇಂದ್ರ, ಪುರಸಭೆ, ಗ್ರಾಪಂ ಮಾಜಿ ಸದಸ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.






