ನೇಪಾಳದಲ್ಲಿ ಸಂಕಷಕ್ಕೆ ಸಿಲುಕಿರುವ ಉಡುಪಿ ಜಿಲ್ಲೆಯ ಜನರ ಮಾಹಿತಿ ನೀಡಲು ಸೂಚನೆ

ಉಡುಪಿ, ಆ.27: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿರುವ ಹಠಾತ್ ಭೀಕರ ಜಲಪ್ರಳಯ ಹಾಗೂ ಭೂಕುಸಿತದಿಂದಾಗಿ ಉಡುಪಿ ಜಿಲ್ಲೆಯಿಂದ ಪ್ರವಾಸ ಅಥವಾ ಯಾತ್ರೆಗೆ ತೆರಳಿ ಅಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆಯಲು ಮತ್ತು ಅವರನ್ನು ಸುರಕ್ಷಿತವಾಗಿ ಕರೆತರಲು ಜಿಲ್ಲಾಡಳಿತದಿಂದ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ನೇಪಾಳದಲ್ಲಿ ಸಿಲುಕಿರುವ ಉಡುಪಿ ಜಿಲ್ಲೆಯ ನಿವಾಸಿಗಳ ಕುಟುಂಬಸ್ಥರ ಅನುಕೂಲಕ್ಕಾಗಿ ಜಿಲ್ಲಾ ಮಟ್ಟದಲ್ಲಿ ತುರ್ತು ಸಹಾಯವಾಣಿಯನ್ನು ತೆರೆಯಲಾಗಿದ್ದು, ಬಾಧಿತರ ವಿವರಗಳನ್ನು ತಕ್ಷಣವೇ ನೀಡುವಂತೆ ಜಿಲ್ಲಾಡಳಿತ ಸೂಚಿಸಿದೆ.
ಸಂಕಷ್ಟದಲ್ಲಿರುವವರ ಹೆಸರು, ವಿಳಾಸ, ಪ್ರಸ್ತುತ ಇರುವ ನಿಖರವಾದ ಸ್ಥಳ, ಮೊಬೈಲ್ ಸಂಖ್ಯೆ ಹಾಗೂ ಇನ್ನಿತರ ತುರ್ತು ಅಗತ್ಯಗಳ ವಿವರಗಳನ್ನು ಶುಲ್ಕ ರಹಿತ ಸಂಖ್ಯೆ: 1077, ದೂ.ಸಂಖ್ಯೆ: 0820-2574802 ಅಥವಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ಬಿಡುಗಡೆ ಮಾಡಲಾದ ಗೂಗಲ್ ಫಾರ್ಮ್ ಲಿಂಕ್ ನಲ್ಲಿಯೂ ವಿವರಗಳನ್ನು ದಾಖಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.




