ಗಂಗೊಳ್ಳಿ ಸಮುದ್ರದಲ್ಲಿ ಮುಳುಗಿದ್ದ ಬೋಟಿನ ಅವಶೇಷಗಳು ಪತ್ತೆ

ಕುಂದಾಪುರ, ಆ.27: ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಸಮುದ್ರದ ನೀರಿನಲ್ಲಿ ಬುಧವಾರ ಮುಳುಗಿದ್ದ ’ಶ್ರೀಬಾಲಾಂಜನೇಯ’ ಬೋಟಿನ ಅವಶೇಷಗಳು ಕೋಟ ಪಡುಕೆರೆಯ ಹಂದಟ್ಟು ಸಮುದ್ರ ತೀರದಲ್ಲಿ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.
ಸಮುದ್ರ ಪಾಲಾದ ಬೋಟ್ ಸಂಪೂರ್ಣ ಚೂರುಚೂರಾಗಿದ್ದು, ಬೋಟ್‌ನ ಅವಶೇಷಗಳು ಕಡಲ ತೀರದಲ್ಲಿ ಒಂದೇ ಕಡೆ ಬಂದು ಬಿದ್ದಿರುವುದು ಕಂಡುಬಂದಿದೆ. ಸ್ಥಳಕ್ಕೆ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸಪೆಕ್ಟರ್ ರಮೇಶ ಕೆ., ಉಪನಿರೀಕ್ಷಕ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಂಗೊಳ್ಳಿಯಿಂದ ಮೀನುಗಾರಿಕೆಗೆ ತೆರಳಿದ್ದ ಭಟ್ಕಳ ಮುಂಡಳ್ಳಿ ಮೂಲದ ನಾಗರಾಜ ಮೊಗೇರ ಮಾಲಕತ್ವದ ’ಶ್ರೀ ಬಾಲಾಂಜನೇಯ’ ಹೆಸರಿನ ಪರ್ಸಿನ್ ಬೋಟು ಗಂಗೊಳ್ಳಿ ಬಂದರಿನಿಂದ ಅನತಿ ದೂರದಲ್ಲಿ ಅಳಿವೆ ಪ್ರದೇಶದಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದ ನೀರಿನಲ್ಲಿ ಮುಳುಗಿ ಹೋಗಿತ್ತು. ಸ್ಥಳೀಯ ಮೀನುಗಾರರು ಗಂಗೊಳ್ಳಿ ಕರಾವಳಿ ಕಾವಲು ಪೊಲೀಸರು ಅಪಾಯದಲ್ಲಿದ್ದ 27 ುೀನುಗಾರರನ್ನು ರಕ್ಷಿಸಿದ್ದರು. ಬೋಟಿನಲ್ಲಿದ್ದ ಬಲೆ ಮತ್ತಿತರ ಸಲಕರಣೆಗಳು ಸಮುದ್ರ ಪಾಲಾಗಿತ್ತು.




