ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

ಕುಂದಾಪುರ, ಆ.27: ಮೀನುಗಾರಿಕೆ ಮುಗಿಸಿ ವಾಪಾಸು ಬರುತ್ತಿದ್ದ ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ರೊಬ್ಬರು ಮೃತಪಟ್ಟ ಘಟನೆ ಮರವಂತೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಮೃತರನ್ನು ಮರವಂತೆ ಕುಪ್ಪನಮನೆ ನಿವಾಸಿ ಪರಮಜ್ಯೋತಿ(43) ಎಂದು ಗುರುತಿಸಲಾಗಿದೆ. ಮರವಂತೆಯ ಪ್ರದೀಪ್ ಖಾರ್ವಿ ಎಂಬವರ ಧರ್ಮ ದೇವತೆ ದೋಣಿಯಲ್ಲಿ ಮೀನುಗಾರಿಕೆ ಕೆಲಸಕ್ಕೆ ಹೋಗಿದ್ದ ಪರಮಜ್ಯೋತಿ ಮರವಂತೆ ಬಂದರಿಗೆ ವಾಪಾಸ್ಸು ಬರುವಾಗ ಸಮುದ್ರದಲ್ಲಿ ಒಮ್ಮಲೇ ಜೋರಾಗಿ ಗಾಳಿ ಬೀಸಿತ್ತೆನ್ನಲಾಗಿದೆ.
ಇದರ ಪರಿಣಾಮ ದೋಣಿಯು ನೀರಿನಲ್ಲಿ ತೇಲಾಡಿದ್ದು, ಇದರಿಂದ ಪರಮಜ್ಯೋತಿ ಆಯತಪ್ಪಿ ಸಮುದ್ರಕ್ಕೆ ಬಿದ್ದರು. ಅವರನ್ನು ಕೂಡಲೇ ಇತರರು ನೀರಿನಿಂದ ಮೇಲಕ್ಕೆ ಎತ್ತಿ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ಪರಮಜ್ಯೋತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




