ಭಗತ್ ಸಿಂಗ್‌ರದ್ದು ಸಾಮಾಜಿಕ ಸಮಾನತೆ ಪರ ಹೋರಾಟ: ಸದಾನಂದ ಬೈಂದೂರು

ಕುಂದಾಪುರ, ಆ.31: ಚರಿತ್ರೆಯಲ್ಲಿ ನಾವು ಓದಿರುವಂತೆ ಭಗತ್ ಸಿಂಗ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಎಂಬ ಪ್ರತಿಮಾತ್ಮಕವಾದ ಅರ್ಥ ದಲ್ಲಿ ಬಳಸಲಾಗಿದೆ. ಭಗತ್ ಸಿಂಗರ ಕ್ರಾಂತಿಯ ಹೋರಾಟ ನ್ಯಾಯ ಮತ್ತು ಸಾಮಾಜಿಕ ಸಮಾನತೆಯನ್ನು ತರುವುದರ ಪರವಾಗಿತ್ತು ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದು ಕುಂದಾಪುರ ಸಮುದಾಯ ಅಧ್ಯಕ್ಷ ಸದಾನಂದ ಬೈಂದೂರು ಹೇಳಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಉಡುಪಿ ಹಾಗೂ ಶಂಕರ ನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವುಗಳ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾದ ಜೀವಪರ ಕ್ರಾಂತಿಕಾರಿ ಭಗತ್‌ಸಿಂಗ್ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಜಯಪ್ರಕಾಶ್ ಶೆಟ್ಟಿ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿ, ವರ್ತಮಾನದಲ್ಲಿ ಭಗತ್ ಸಿಂಗ್, ಅಂಬೇಡ್ಕರ್ ಮತ್ತು ಗಾಂಧಿ ಚರ್ಚಿತರಾಗುತ್ತಾರೆ. ಏಕೆಂದರೆ ಇವರೆಲ್ಲ ಸಾಮಾಜಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ಬಗ್ಗೆ ಘಂಟಾಘೋಷವಾಗಿ ನಿರ್ಭಿಡೆಯಿಂದ ಮಾತನಾಡುತ್ತಿದ್ದರು ಎಂದರು.
ವಾಸ್ತವಿಕವಾಗಿ ವಿದ್ಯಾರ್ಥಿಗಳು ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು. ಕೇವಲ ವಿದ್ಯೆಯಿಂದ ವಾಸ್ತವವನ್ನು ಅರಿಯಲು ಸಾಧ್ಯವಿಲ್ಲ. ದೇಶದ ಸಂವಿಧಾನಿಕ ಮೌಲ್ಯಗಳನ್ನು ಅರಿತುಕೊಂಡು ಬದುಕಬೇಕು. ಭಗತ್ ಸಿಂಗ್ ಸಾಮಾಜಿಕ ನ್ಯಾಯ ಮತ್ತು ಸತ್ಯಕ್ಕಾಗಿ ಬದುಕಿದವರು ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟರಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲ ನಾಧಿಕಾರಿ ಡಾ.ದಿವ್ಯಾ ಎಂ.ಎಸ್., ಐಕ್ಯುಎಸಿ ಸಂಚಾಲಕಿ ಡಾ.ನಳಿನಾಶ್ರೀ, ಚಕೋರ ಜಿಲ್ಲಾ ಸಂಚಾಲಕಿ ಶಾಲಿನಿ ಯು.ಬಿ. ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಗಂಗಾಧರ ಆರ್.ಎಚ್. ಸ್ವಾಗತಿಸಿದರು. ಚಕೋರ ಜಿಲ್ಲಾ ಸಂಚಾಲಕ ರಾಮಾಂಜಿ ವಂದಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಸಚಿನ್ ಎಸ್. ಕಾರ್ಯಕ್ರಮ ನಿರೂಪಿಸಿದರು.






