ಅಸ್ಪೃಶ್ಯತೆ ಪ್ರಶ್ನಿಸಿದವರ ವಿರುದ್ಧ ಕ್ರಮ ಅಪಾಯಕಾರಿ: ಡಾ.ಎಕ್ಕಾರು

ಉಡುಪಿ, ಸೆ.1: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್ಯಾಲಿಯ ನಂತರದ ಶುದ್ಧೀಕರಣದಂತಹ ಜಾತಿವಾದಿ ಕೃತ್ಯದ ಬಗ್ಗೆ ಧ್ವನಿ ಎತ್ತಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಿಂದ ಪಾದಯಾತ್ರೆ ಮೂಲಕ ಬ್ರಹ್ಮಗಿರಿ ಸರ್ಕಲ್‌ಗೆ ಆಗಮಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಹಾಗೂ ಉತ್ತರಖಾಂಡ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ ವಿರುದ್ಧ ದಾಖಲಿಸಿರುವ ಎಫ್ ಐಆರ್ ನ್ನು ಕೂಡಲೇ ರದ್ದುಗೊಳಿಸುವಂತೆ ಒತ್ತಾಯಿಸಲಾಯಿತು.
ಹಿರಿಯ ಚಿಂತಕ ಡಾ.ಗಣನಾಥ ಎಕ್ಕಾರು ಮಾತನಾಡಿ, ಖರ್ಗೆ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸುವ ಮೂಲಕ ರಾಷ್ಟ್ರದ ಪ್ರಮುಖ ಹುದ್ದೆಯಲ್ಲಿರುವ ನಾಯಕನಿಗೆ ಅವಮಾನ ಮಾಡಲಾಗಿದೆ. ಹಾಗಾದರೆ ಈ ದೇಶದಲ್ಲಿ ರುವ ಜನಸಾಮಾನ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಸ್ಥಿತಿ ಹೇಗಿರಬಹುದು ಎಂಬುದು ಊಹಿಸು ವುದು ಅಸಾಧ್ಯ ವಾಗಿದೆ. ಇದೇ ಸ್ಥಿತಿ ಮುಂದುವರೆದರೆ ಮುಂದೆ ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿದವರ ಪ್ರತಿಯೊಬ್ಬರ ಮೇಲೂ ಪ್ರಕರಣ ದಾಖಲಾಗುವ ಸಾದ್ಯತೆ ಇದೆ ಎಂದರು.
ಇಂದು ಈ ದೇಶದ ಸಂವಿಧಾನದ ಮುಖ್ಯ ಆಶಯವಾಗಿರುವ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಭಾತೃತ್ವಕ್ಕೆ ಧಕ್ಕೆ ತರುವ ಬೆಳವಣಿಗೆಗಳು ನಡೆಯುತ್ತಿವೆ. ಖರ್ಗೆ ವಿಚಾರದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿದವರ ವಿರುದ್ಧ ಯಾವುದೇ ಕ್ರಮ ಇಲ್ಲ. ಆದರೆ ಅದನ್ನು ಪ್ರಶ್ನಿಸಿದವರ ವಿರುದ್ದ ಪ್ರಕರಣ ದಾಖಲಿಸಿರುವುದು ದುರಂತ. ಈ ಮೂಲಕ ಸರಕಾರ ಆಡಳಿತ ಯಂತ್ರವನ್ನು ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗರ್ಫೂ ಮಾತನಾಡಿ, ಜಾತಿವಾದಿ ಕೃತ್ಯದ ಬಗ್ಗೆ ಧ್ವನಿಯೆತ್ತಿದ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕೇಂದ್ರ ಹಾಗೂ ಉತ್ತರಖಂಡ ಸರಕಾರ ಪ್ರಜಾ ಪ್ರಭುತ್ವಕ್ಕೆ ಬೆಲೆ ಇಲ್ಲದಂತೆ ವರ್ತಿಸುತ್ತಿದೆ. ಈ ಕೃತ್ಯವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು
ಕಾಂಗ್ರೆಸ್ ವಕ್ತಾರೆ ವರೋನಿಕಾ ಕರ್ನೆಲಿಯೋ ಮಾತನಾಡಿ, ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ ಪ್ರಜಾಪ್ರಭುತ್ವದ ಬುನಾದಿಯೇ ಅಲುಗಾಡುತ್ತಿದೆ. ಸಂವಿಧಾನದ ಧ್ವನಿಯನ್ನು ಧಮನಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಯುವಜನತೆಯನ್ನು ಹೆಚ್ಚು ಆಕರ್ಷಿಸುತ್ತಿರುವ ರಾಹುಲ್ ಗಾಂಧಿ ಬಗ್ಗೆ ಕೇಂದ್ರ ಸರಕಾರಕ್ಕೆ ಭಯ ಪ್ರಾರಂಭವಾಗಿದೆ. ಅದಕ್ಕಾಗಿ ಈ ರೀತಿ ಎಫ್‌ಐಆರ್ ದಾಖಲಿಸುವ ಮೂಲಕ ಅವರ ಧ್ವನಿಯನ್ನು ಅಡಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಮೇಶ್ ಕಾಂಚನ್ , ಪ್ರಖ್ಯಾತ್ ಶೆಟ್ಟಿ, ಜ್ಯೋತಿ ಹೆಬ್ಬಾರ್, ಸುರೇಶ್ ಶೆಟ್ಟಿ ಬನ್ನಂಜೆ, ಗೀತಾ ವಾಗ್ಳೆ, ಸತೀಶ್ ಕೊಡವೂರು, ದಯಾನಂದ ಪಿ, ಗಣೇಶ್ ನೆರ್ಗಿ, ಕೃಷ್ಣ ಶೆಟ್ಟಿ ಬಜಗೋಳಿ, ಸತೀಶ್ ಕೊಡವೂರು, ಶಶಿಧರ ಶೆಟ್ಟಿ ಎರ್ಮಾಳ್ ಮೊದಲಾದವರು ಉಪಸ್ಥಿತರಿದ್ದರು.






