ಪ್ರತಿಯೊಂದು ಪ್ರಕರಣಗಳನ್ನು ಎಚ್ಚರಿಕೆಯಿಂದ ಗಮನಿಸಿ ಕ್ರಮ: ಎಸ್ಪಿ ಹರಿರಾಂ ಶಂಕರ್

ಉಡುಪಿ, ಸೆ.2: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೆಲವೊಂದು ಪ್ರಕರಣಗಳನ್ನು ಅತೀ ಶೀಘ್ರದಲ್ಲಿ ಬಯಲಿಗೆಳೆದು ತಪ್ಪಿತಸ್ಥರನ್ನು ಬಂಧಿಸುವ ಮೂಲಕ ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸಿ ಸಮುದಾಯದ ಜನರಲ್ಲಿ ವಿಶ್ವಾಸವನ್ನು ಮೂಡಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹಾಗೂ ಅವರ ಇಲಾಖೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಬುಧವಾರ ಅಭಿನಂದಿಸಿತು.
ಈ ವೇಳೆ ಮಾತನಾಡಿದ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷ ಮೆಲ್ವಿನ್ ಆರಾನ್ಹಾ ಶಿರ್ವ, ಇತ್ತೀಚೆಗೆ ನಡೆದ ಕೆಲವೊಂದು ಘಟನೆಗಳು ಕ್ರೈಸ್ತ ಸಮುದಾಯಕ್ಕೆ ಆಘಾತ ತಂದಿದ್ದವು. ಆದರೆ ಪ್ರಕರಣ ಗಳನ್ನು ತನ್ನ ಇಲಾ ಖೆಯ ಸಿಬಂದಿಗಳ ಮೂಲಕ ಅತೀ ಶೀಘ್ರವಾಗಿ ಸ್ಪಂದಿಸಿ ಪ್ರಕರಣಗಳನ್ನು ಭೇದಿಸಿ ಅಪರಾಧಿಗಳನ್ನು ಬಂಧಿಸುವ ಮೂಲಕ ಮಾದರಿ ಕಾರ್ಯವನ್ನು ಜಿಲ್ಲಾ ಪೊಲೀಸ್ ಇಲಾಖೆ ಕೈಗೊಂಡಿರುವುದು ಶ್ಲಾಘನೀಯ ಸಂಗತಿಯಾಗಿದೆ. ಈ ಮೂಲಕ ಸಮುದಾಯದಲ್ಲಿ ಪೊಲೀಸ್ ಇಲಾಖೆಯ ಕಾರ್ಯ ವೈಖರಿಗೆ ಶ್ಲಾಘನೆ ವ್ಯಕ್ತವಾಗಿದ್ದು ಮುಂದಿನ ದಿನ ಗಳಲ್ಲಿ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮುದಾಯದ ಸಹಕಾರ ಸದಾ ನೀಡುವುದಾಗಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಇಲಾಖೆ ಸದಾ ಪ್ರತಿಯೊಂದು ಪ್ರಕರಣಗಳನ್ನು ಎಚ್ಚರಿಕೆಯಿಂದ ಗಮನಿಸಿ ಸೂಕ್ತ ಪರಿಹಾರ ಕಂಡುಕೊಳ್ಳುತ್ತಿದ್ದು ಇಲಾಖೆಯ ಅಧಿಕಾರಿಗಳ ಶ್ರಮ ಮತ್ತು ಸಹಕಾರದಿಂದ ಸಾಧ್ಯವಾಗಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಸಮುದಾಯದ ಸಹಕಾರ ಬಯಸುವುದಾಗಿ ಹೇಳಿದರು.
ನಿಯೋಗದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕ ವಂ.ಅನಿಲ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಜುಲಿಯೆಟ್ ಡಿಸೋಜ, ಕೋಶಾಧಿಕಾರಿ ಗ್ಯಾರಿಫಿಲ್ಡ್ ಉರ್ಬನ್ ಲೂವಿಸ್, ನಿಯೋಜಿತ ಅಧ್ಯಕ್ಷ ಲೂವಿಸ್ ಡಿಸೋಜ, ಎಐಸಿಯು ರಾಜ್ಯಾಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕಥೊಲಿಕ್ ಸಭಾ ಉಡುಪಿ ಪ್ರದೇಶದ ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ಮೇರಿ ಡಿಸೋಜ, ಡಾ.ಜೆರಾಲ್ಡ್ ಪಿಂಟೊ, ಶಿರ್ವ ವಲಯಾಧ್ಯಕ್ಷ ಜೆರಾಲ್ಡ್ ರೊಡ್ರಿಗಸ್, ಉಡುಪಿ ವಲಯಾಧ್ಯಕ್ಷ ಕಿರಣ್ ಲೂವಿಸ್, ಕಲ್ಯಾಣಪುರ ವಲಯಾಧ್ಯಕ್ಷ ಜೊಯೆಲ್ ಆಲ್ಮೇಡಾ, ಪದಾಧಿಕಾರಿಗಳಾದ ರೊಸಾರಿಯೋ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.






