ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು: ನೂತನ ಪದವಿ ವಿದ್ಯಾರ್ಥಿಗಳಿಗೆ ಒರಿಯೆಂಟೇಶನ್ ಮತ್ತು ವಿವಿಧ ಸಂಘಗಳ ಉದ್ಘಾಟನೆ

ಕುಂದಾಪುರ: ಇಲ್ಲಿನ ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ವತಿಯಿಂದ 2026–27ನೇ ಶೈಕ್ಷಣಿಕ ಸಾಲಿನ ನೂತನ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ ಹಾಗೂ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ನಡೆಯಿತು.
ಕೋಟ ಪಡುಕೆರೆಯ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ನಾಯಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿವಿಧ ಸಂಘಗಳು ವಿದ್ಯಾರ್ಥಿ ಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದನ್ನು ಬೆಳೆಸುವ ಉತ್ತಮ ವೇದಿಕೆಗಳಾಗಿವೆ ಎಂದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಎಂ. ಅಬ್ದುಲ್ ರೆಹಮಾನ್ ಬ್ಯಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಜ್ಞಾನ, ಕೌಶಲ್ಯ, ಸೃಜನಶೀಲತೆ ಹಾಗೂ ಉತ್ತಮ ಮೌಲ್ಯಗಳಿಂದ ಕೂಡಿರಬೇಕು ಎಂದು ಕಾಲೇಜಿನ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಸದಸ್ಯ ಡಾ. ಆಸಿಫ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತ ನಾಡಿ, ವಿದ್ಯಾರ್ಥಿಗಳು ಕಾಲೇಜಿನ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತಾ ತಮ್ಮಲ್ಲಿ ಹೊಸತನದ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲರಾದ ಶಬೀನಾ ಹಂಝಾರವರು ಶೈಕ್ಷಣಿಕ ವರ್ಷದ ಬಗ್ಗೆ ವಿದ್ಯಾರ್ಥಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಕಾಲೇಜಿನ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳ ಕುರಿತು ಪರಿಚಯಿಸಿದರು. ಮತ್ತು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಲು ವಿವಿಧ ಸಂಘಗಳ ಚಟುವಟಿಕೆಗಳಿಗೆ ಪ್ರೇರಣೆ ನೀಡುವ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ 2025–26ನೇ ಸಾಲಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬಿ.ಬಿ.ಎ., ಬಿಕಾಂ ಹಾಗೂ ಬಿಸಿಎ ವಿಭಾಗಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸಂಘಗಳ ವಿದ್ಯಾರ್ಥಿ ಸಂಯೋಜಕರಿಗೆ ಸಂಘಗಳ ಕಾರ್ಯಕ್ರಮಗಳ ನಿಯಮ, ನಿಬಂಧನೆಗಳು ಹಾಗೂ ಜವಾಬ್ದಾರಿಗಳನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಶೆಟ್ಟಿ, ಉಪಪ್ರಾಂಶುಪಾಲರಾದ ಅಫ್ರೀನ್ ಖಾನ್ ಹಾಗೂ ಐಕ್ಯೂಎಸಿ ಸಂಯೋಜಕಿ ನೂತನ್ ಎಸ್. ಅವರು ಉಪಸ್ಥಿತರಿದ್ದರು.
ವಿವಿಧ ಸಂಘಗಳ ಪರಿಚಯವನ್ನು ಗಣಕ ವಿಭಾಗದ ಉಪನ್ಯಾಸಕರಾದ ಖಲೀಲ್ ರವರು ನೀಡಿದರು.
ಗಣಕ ವಿಭಾಗದ ಉಪನ್ಯಾಸಕಿಯವರಾದ ಸಹರಾ ಅವರು ಸ್ವಾಗತಿಸಿ, ತೃತಿಯ ಬಿಸಿಎ ವಿದ್ಯಾರ್ಥಿನಿ ಆಮ್ನಹಿಬ ನಿರೂಪಿಸಿ, ವಂದಿಸಿದರು.






