ತಾಯಿ-ಮಗಳಿಂದ ಅಷ್ಟಮಿಗೆ ‘ಕೃಷ್ಣಾಸುರ’ ವೇಷ

ಉಡುಪಿ, ಸೆ.2: ಶ್ರೀಕೃಷ್ಣಾಷ್ಟಮಿ ಅಂಗವಾಗಿ ಮಲ್ಪೆ ಲಕ್ಷ್ಮೀನಗರದ ಶ್ರೀ ಸಿದ್ದಿ ಇವೆಂಟ್ಸ್ ವತಿಯಿಂದ ಈ ಬಾರಿ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಮಲ್ಪೆಯ ದಿವ್ಯ ಸತೀಶ್ ಹಾಗೂ ಅವರ ಎಂಟು ವರ್ಷದ ಪುತ್ರಿ ಸಿದ್ದಿ ಎಸ್. ಕಾಮತ್ ಅವರು ‘ಕೃಷ್ಣಾಸುರ’ ವೇಷ ಧರಿಸಿ ಎಲ್ಲರ ಗಮನ ಸೆಳೆಯಲಿದ್ದಾರೆ.
ಸೆ.4 ಮತ್ತು 5ರಂದು ವಿಶೇಷ ವೇಷಧಾರಿಗಳಾಗಿ ಜನರ ಮುಂದೆ ಬರುವ ತಾಯಿ-ಮಗಳು, ಅದರ ಮೂಲಕ ಸಂಗ್ರಹವಾಗುವ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುವ ಸಂಕಲ್ಪ ಮಾಡಿದ್ದಾರೆ. ಉಡುಪಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ದಿವ್ಯ ಸತೀಶ್ ಈ ವಿಷಯ ತಿಳಿಸಿದರು.
ಸಿದ್ದಿ ಎಸ್. ಕಾಮತ್ ಪ್ರತೀ ವರ್ಷ ಶ್ರೀಕೃಷ್ಣಾಷ್ಟಮಿಯಲ್ಲಿ ಕೃಷ್ಣನ ವೇಷ ಧರಿಸುತ್ತಿದ್ದಳು. ಈ ಬಾರಿ ಮಗಳೊಂದಿಗೆ ತಾನೂ ಕೂಡ ಅಸುರನ ವೇಷ ಧರಿಸಿ, ಜನರಿಂದ ದೊರೆಯುವ ಸಹಕಾರವನ್ನು ಸಮಾಜದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲು ಮುಂದಾಗಿರುವುದಾಗಿ ತಿಳಿಸಿದರು.
ಸೆ.4 ಮತ್ತು 5ರಂದು ಉಡುಪಿ, ಮಲ್ಪೆ, ತೊಟ್ಟಂ, ಪಡುಕೆರೆ, ಕಟಪಾಡಿ ಭಾಗದಲ್ಲಿ ತಾಯಿ-ಮಗಳು ಕೃಷ್ಣಾಸುರ ವೇಷದಲ್ಲಿ ಸಂಚರಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ನೀಡುವ ನೆರವನ್ನು ಸಂಗ್ರಹಿಸಿ ಅಗತ್ಯವಿರುವ ಬಡ ಮಕ್ಕಳ ಶಿಕ್ಷಣಕ್ಕೆ ಬಳಸಲಾಗುವುದು ಎಂದು ದಿವ್ಯ ಕಾಮತ್ ಹೇಳಿದರು.
ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳಿಗೆ ಸಾಧ್ಯವಾದಷ್ಟು ನೆರವು ನೀಡುವ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ದಿವ್ಯ ಸತೀಶ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಪೆ ಸಿದ್ದಿ ಐ ಕೇರ್ ಮಾಲಕ ಸತೀಶ್ ಕಾಮತ್, ಸಿದ್ದಿ ಎಸ್. ಕಾಮತ್, ರಕ್ಷಿತ್ (ಮುನ್ನ), ನಿತೇಶ್ ಹಾಗೂ ಡಾ.ದೀಪ ಉಪಸ್ಥಿತರಿದ್ದರು.






