ತುಳುನಾಡಿನ ವೈವಿಧ್ಯ ಅನನ್ಯ: ಸಿಇಓ ಪ್ರತೀಕ್ ಬಾಯಲ್

ಮಣಿಪಾಲ, ಸೆ.3: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಾಹೆ ಇದರ ಘಟಕವಾಗಿರುವ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸಾಯನ್ಸಸ್, ಹ್ಯುಮಾನಿಟೀಸ್ ಆ್ಯಂಡ್ ಆರ್ಟ್ಸ್ ಮಿಶ ಸಂಸ್ಥೆಯು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಆರಂಭಿಸಲಾದ ತುಳು ಸಂಭಾಷಣ ಕಲಿಕೆಯ ತರಗತಿಯನ್ನು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ತುಳು ಪ್ರಾದೇಶಿಕ ಪರಿಸರವು ಒಂದು ಸಂಕೀರ್ಣವಾದ ಸಾಂಸ್ಕೃತಿಕ ಪ್ರದೇಶ ವಾಗಿದೆ. ಇಲ್ಲಿ ಹಲವು ಭಾಷೆಗಳಿವೆ. ಆದರೆ, ಎಲ್ಲವನ್ನೂ ಎಲ್ಲರನ್ನೂ ತುಳು ಭಾಷೆ ಒಂದು ಸೂತ್ರದಲ್ಲಿ ಜೋಡಿಸು ತ್ತದೆ. ಹಿಂದಿ ಭಾಷಿಕನಾದರೂ ಕನ್ನಡ ನನಗೆ ಚೆನ್ನಾಗಿ ಬರುತ್ತಿದೆ. ಈ ಪ್ರದೇಶದ ತುಳು ಭಾಷೆಯನ್ನು ಕಲಿಯಲು ನಾನು ತುಂಬ ಅಭಿಮಾನ ಪಡುತ್ತೇನೆ’ ಎಂದರು.
ಅಧ್ಯಕ್ಷತೆಯನ್ನು ಮಿಶದ ನಿರ್ದೇಶಕಿ ಪ್ರೊ.ಗಾಯತ್ರಿ ಪ್ರಭು ವಹಿಸಿದ್ದರು. ತುಳುಭಾಷಾ ತರಗತಿಯ ಬೋಧಕ ಮತ್ತು ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು, ತುಳು ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಮತ್ತು ತುಳು ಅಕಾಡೆಮಿಯ ಸದಸ್ಯ ಸಂತೋಷ್ ಶೆಟ್ಟಿ ಹಿರಿಯಡಕ ಮುಖ್ಯ ಅತಿಥಿಗಳಾಗಿದ್ದರು.
ಮಾಹೆಯ ಸೆಂಟರ್ ಫಾರ್ ಕನ್ನಡ ಆಂಡ್ ರೀಜನಲ್ ಲ್ಯಾಂಗ್ವೇಜಸ್‌ನ ಸಂಯೋಜಕ ಡಾ.ಪೃಥ್ವೀರಾಜ್ ಸ್ವಾಗತಿಸಿ ದರು. ವಿದ್ಯಾರ್ಥಿನಿ ವಿದ್ಮಹಿ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ತುಳುಭಾಷಾ ತರಗತಿಯಲ್ಲಿ ಮಾಹೆಯ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಮಾನವಿಕ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬಂದಿಗಳು ಸೇರಿದಂತೆ ಸುಮಾರು 45 ಮಂದಿ ಭಾಗವಹಿಸುತ್ತಿದ್ದಾರೆ.






