ಉಡುಪಿ: ಸಂಪನ್ನಗೊಂಡ ‘ಶ್ರೀಕೃಷ್ಣ ಲೀಲೋತ್ಸವ’, ವಿಟ್ಲಪಿಂಡಿ

ಉಡುಪಿ, ಸೆ.5: ಮಳೆಯ ಹಸ್ತಕ್ಷೇಪದ ಯಾವುದೇ ಭೀತಿ ಇಲ್ಲದೇ, ಚಿನ್ನದ ರಥದಲ್ಲಿ ಬಾಲಕೃಷ್ಣನ ಮೂರ್ತಿಯ ಮೆರವಣಿಗೆ, ರಥಬೀದಿಯ ಅಲ್ಲಲ್ಲಿ ನಿಲ್ಲಿಸಿದ ಮೊಸರು ಕುಡಿಕೆಗಳನ್ನು ಒಡೆಯುತ್ತಾ ಸಾಗುವ ಸಾಂಪ್ರದಾಯಿಕ ವೇಷದ ಗೊಲ್ಲರು ಹೀಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣನ ಜನ್ಮ ಹಾಗೂ ಬಾಲಲೀಲೆಗಳನ್ನು ನೆನಪಿಸುವ ಶ್ರೀಕೃಷ್ಣಲೀಲೋತ್ಸವ, ವಿಟ್ಲಪಿಂಡಿ, ಮೊಸರುಕುಡಿಕೆ ಈ ಬಾರಿ ಭಾರೀ ಜನರ ಹರ್ಷೋದ್ಗಾರಗಳ ನಡುವೆ ಸಂಪನ್ನಗೊಂಡಿತು.
ಅಪರಾಹ್ಣ 3:30ರ ಸುಮಾರಿಗೆ ಚಾಲನೆಗೊಂಡ ವಿಟ್ಲಪಿಂಡಿ, ಶ್ರೀಕೃಷ್ಣ ಲೀಲೋತ್ಸವದ ವೈಭವದ ಶೋಭಾಯಾತ್ರೆ ಯಲ್ಲಿ ಪರ್ಯಾಯ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರೊಂದಿಗೆ ಉಡುಪಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಕೃಷ್ಣಾಪುರ ಮಠಾಧೀಶರು ಪಾಲ್ಗೊಂಡರು.
ಈ ಉತ್ಸವಕ್ಕೆಂದು ವಿಶೇಷವಾಗಿ ತಯಾರಿಸಲಾದ ಮೃಣ್ಮಯ(ಮಣ್ಣಿನಲ್ಲಿ ತಯಾರಿಸಿದ ಶ್ರೀಕೃಷ್ಣನ ಮೂರ್ತಿ) ಮೂರ್ತಿಯನ್ನು ಚಿನ್ನದ ರಥದಲ್ಲಿರಿಸಿ ರಥಬೀದಿಯ ಸುತ್ತ ಮೆರವಣಿಗೆ ನಡೆಸಲಾಯಿತು. ಇನ್ನೊಂದು ರಥದಲ್ಲಿ ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಉತ್ಸವ ಮೂರ್ತಿನ್ನಿರಿಸಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಸಲುವಾಗಿ ಮಣ್ಣಿನ ಮಡಕೆಯಲ್ಲಿ ಮೊಸರು, ಹಾಲು, ಓಕುಳಿಗಳನ್ನು ತುಂಬಿ ರಥಬೀದಿ ಸುತ್ತಲೂ ವಿಶೇಷವಾಗಿ ನಿರ್ಮಿಸಿದ 13 ಗುರ್ಜಿಗಳಿಗೆ ಅವುಗಳನ್ನು ಕಟ್ಟಿ ಯಾದವ ವೇಷಧಾರಿಗಳಾದ ಉಡುಪಿಯ ಗೊಲ್ಲರು ಉದ್ದನೆಯ ಕೋಲುಗಳಿಂದ ಮಡಕೆಗಳನ್ನು ಒಡೆಯುವ ಆಟವನ್ನು ಆಡಿದರು.
ರಥಬೀದಿಯ ಮಧ್ಯಭಾಗದಲ್ಲಿ ಹಾಕಲಾದ ವೇದಿಕೆಯಲ್ಲಿ ಹುಲಿವೇಷ ಪ್ರದರ್ಶನವನ್ನು ಪರ್ಯಾಯ ಸ್ವಾಮೀಜಿಗಳು ವೀಕ್ಷಿಸಿದರು. ಬಳಿಕ ಸ್ವಾಮೀಜಿಗಳು ನೆರೆದ ಭಕ್ತರತ್ತ ಉಂಡೆ, ಚಕ್ಕುಲಿ ಹಾಗೂ ಹಣ್ಣು ಹಂಪಲುಗಳನ್ನು ಎಸೆದರು. ಸ್ವಾಮೀಜಿ ಎಸೆದ ಪ್ರಸಾದವನ್ನು ಸ್ವೀಕರಿಸಲು ಭಕ್ತರು ಮುಗಿಬಿದ್ದರು.
ಮೆರವಣಿಗೆಯ ಕೊನೆಯಲ್ಲಿ ಚಿನ್ನದ ರಥದಲ್ಲಿರಿಸಿದ ಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸುವುದರೊಂದಿಗೆ ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ವಿಧಿಗಳು ಸಂಪನ್ನಗೊಂಡವು. ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಶೃದ್ಧೆ, ಭಕ್ತಿಗಳಿಂದ ವೈವಿಧ್ಯಮಯ ಧಾರ್ಮಿಕ, ಸಾಸ್ಂಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.
ಮೆರವಣಿಗೆಯಲ್ಲಿ ಹುಲಿವೇಷ, ಚಂಡೆ, ತಟ್ಟಿರಾಯ, ವಾದ್ಯ, ಕೃಷ್ಣ ವೇಷ, ರಕ್ಕಸ ವೇಷ ಸೇರಿದಂತೆ ವಿವಿಧ ವೇಷಗಳು ಕಂಡುಬಂದವು. ಶೀರೂರು ಮಠದ ಎದುರು ಈ ಬಾರಿ ಉಡುಪಿಯಲ್ಲಿ ಮೊದಲ ಬಾರಿ ಆಯೋಜಿಸಲಾದ ಮಲ್ಲಯುದ್ಧದ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು. ಇದಕ್ಕಾಗಿಯೇ ವಿಶೇಷವಾದ ಮಣ್ಣಿನ ಅಂಗಣವನ್ನು ಸಜ್ಜುಗೊಳಿಸಲಾಗಿತ್ತು. ಮೈಸೂರು, ಮಂಡ್ಯ, ಮಂಗಳೂರಿನ ಕುಸ್ತಿಪಟುಗಳು ಇದರಲ್ಲಿ ಪಾಲ್ಗೊಂಡರು.
ಅಡಿಕೆ ಮರ ಹತ್ತಿದ ಭೂಪ: ಕೆಲವರ್ಷಗಳ ಹಿಂದೆ ನಡೆದ ಅಪಘಾತದ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದ್ದ ವಿಟ್ಲಪಿಂಡಿಯಲ್ಲಿ ಕಠಿಣವಾದ ಅಡಿಕೆ ಮರ ಹತ್ತುವ ಸ್ಪರ್ಧೆಯನ್ನು ಈ ಬಾರಿ ಪುನರಾರಂಭಿಸಲಾಗಿದ್ದು, ಜಾರುವ ಅಡಿಕೆ ಮರ ಹತ್ತುವ ಸ್ಪರ್ಧೆಯಲ್ಲಿ ಹಲವರು ಸ್ಪರ್ಧಿಸಿ ಕೊನೆಗೂ ಮರ ಹತ್ತಿದ ಭೂಪನೊಬ್ಬ ಬಹುಮಾನವನ್ನು ಗೆದ್ದುಕೊಂಡನು.
ವೇಷಗಳ ಭರಾಟೆ: ನಗರದ ಹಲವು ಕಡೆಗಳಲ್ಲಿ ಇಂದು ಹುಲಿವೇಷ ಹಾಗೂ ಇತರ ವೇಷಗಳ ಪ್ರದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ರಾಜಾಂಗಣದಲ್ಲಿ ಸಂಜೆ ಹುಲಿವೇಷ, ಜಾನಪದ ಕುಣಿತ ಸ್ಪರ್ಧೆಗಳು ನಡೆದವು. ಈ ಬಾರಿ ಹುಲಿವೇಷಗಳು ಸೇರಿದಂತೆ ವಿವಿಧ ವೇಷಧಾರಿಗಳ ಸಂಖ್ಯೆ ಅಪರಿಮಿತವಾಗಿದ್ದ ಹಿನ್ನೆಲೆಯಲ್ಲಿ ಉಡುಪಿ ನಗರದೊಳಗಿನ ಹೆಚ್ಚಿನ ಅಂಗಡಿಮುಂಗಟ್ಟುಗಳು ಬಾಗಿಲು ಹಾಕಿದ್ದವು!.
ಮಠದ ರಾಜಾಂಗಣ ಹಾಗೂ ಭೋಜನಶಾಲೆಗಳಲ್ಲಿ ಬೆಳಗಿನಿಂದಲೇ ಸಾರ್ವಜನಿಕರಿಗೆ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಶ್ರೀಕೃಷ್ಣ ಜಯಂತಿಯ ಪ್ರಯುಕ್ತ, ಕಳೆದ ನಡುರಾತ್ರಿ 12:12ಕ್ಕೆ ಪರ್ಯಾಯ ಶೀರೂರುಶ್ರೀಗಳು ಕೃಷ್ಣದೇವರಿಗೆ ವಿಶೇಷ ಪೂಜೆ ನೆರವೇರಿಸಿ, ತುಳಸಿ ಸನ್ನಿಧಿಯಲ್ಲಿ ಮೊದಲ ಬಾರಿಗೆ ಅರ್ಘ್ಯಪ್ರಧಾನ ಮಾಡಿದ್ದರು. ಕೃಷ್ಣಾಪುರ ಮಠಾಧೀಶರು ಅವರ ಜೊತೆಗಿದ್ದರು.
ಬಿಗಿ ಬಂದೋಬಸ್ತ್: ವಿಟ್ಲಪಿಂಡಿಯಲ್ಲಿ ನಾಡಿನಾದ್ಯಂತದಿಂದ ಬಂದ ಸಹಸ್ರಾರು ಸಂಖ್ಯೆಯ ಭಕ್ತರು ಭಾಗಿಯಾದ ಹಿನ್ನೆಲೆಯಲ್ಲಿ ರಥಬೀದಿ, ರಾಜಾಂಗಣ ಪಾರ್ಕಿಂಗ್ ಪ್ರದೇಶ ಹಾಗೂ ಮಠದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವಾಹನಗಳ ಭರಾಟೆ ಹಾಗೂ ಜನಜಂಗುಳಿಯಿಂದಾಗಿ ಇಂದು ಬೆಳಗಿನಿಂದಲೇ ನಗರದ ಪ್ರಮುಖ ರಸ್ತೆಗಳಲ್ಲಿ, ಶ್ರೀಕೃಷ್ಣ ಮಠದ ಆಸುಪಾಸಿನ ರಸ್ತೆಗಳಲ್ಲಿ ಸುಧೀರ್ಘ ಟ್ರಾಫಿಕ್ ಜಾಮ್ ಕಂಡುಬಂದಿದ್ದು, ಪಾದಾಚಾರಿಗಳು ಪರದಾಡುವಂತಾಯಿತು. ರಥಬೀದಿಯಲ್ಲೂ ಹೂಮಾರಾಟಗಾರರ ಭರಾಟೆ, ಹುಲಿವೇಷಧಾರಿಗಳ ಓಡಾಟ, ನಲಿಕೆಯಿಂದಾಗಿ ನಡೆದಾಡುವುದೇ ಕಷ್ಟಕರ ವಾಗಿತ್ತು.






