ಗಮನ ಸೆಳೆದ ತಮಿಳುನಾಡು ಸಿಎಂ, ಸೊಳ್ಳೆ - ನರ್ಸ್ ವೇಷಧಾರಿ !

ಉಡುಪಿ, ಸೆ.5: ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಯ ವಿಟ್ಲಪಿಂಡಿ ಕಾರ್ಯ ಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ವೇಷಧಾರಿ ಹಾಗೂ ಮಲೇರಿಯಾ ಜಾಗೃತಿ ಮೂಡಿಸುವ ಸೊಳ್ಳೆ ಮತ್ತು ನರ್ಸ್ ವೇಷ ಗಮನ ಸೆಳೆಯಿತು.
ಕಪ್ಪು ಕೋಟು ಧರಿಸಿದ ಭದ್ರತಾ ಸಿಬ್ಬಂದಿ, ಮುಂಭಾಗದಲ್ಲಿ ಕಪ್ಪು ಬಣ್ಣದ ಕಾರು, ಅದರ ಹಿಂದೆ ತೆರೆದ ವಾಹನದಲ್ಲಿ ನಿಂತು ಜನರತ್ತ ಕೈಬೀಸುತ್ತಿದ್ದ ವಿಜಯ್ ವೇಷಧಾರಿ ಉಡುಪಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಮನ ಸೆಳೆ ದರು. ಹಲವು ವೇಷಗಳ ಮಧ್ಯೆ ವಿಜಯ್ ವೇಷಧಾರಿ ಎಲ್ಲರ ಆಕರ್ಷಣೀಯ ಕೇಂದ್ರ ಬಿಂದು ಆಗಿದ್ದರು. ಟೀಮ್ ಸ್ಮಾಟ್ ಆರ್ಟ್ ಕುರ್ಕಾಲು ನೇತೃತ್ವದಲ್ಲಿ ವಿಜಯ್ ವೇಷಧಾರಿ ತಮ್ಮ ವಿಶಿಷ್ಟ ಶೈಲಿಯಲ್ಲಿ ಅಭಿಮಾನಿಗಳ ಮನರಂಜಿಸಿದರು.
ಅದೇ ರೀತಿ ಸೊಳ್ಳೆ ಹಾಗೂ ನರ್ಸ್ ವೇಷಧಾರಿಗಳು ರಥಬೀದಿಯಲ್ಲಿ ತಿರುಗಿ ಜನರಲ್ಲಿ ಮಲೇರಿಯಾ ರೋಗದ ಬಗ್ಗೆ ಜಾಗೃತಿ ಮೂಡಿಸಿದರು. ನರ್ಸ್ ತನ್ನ ಒಂದು ಕೈಯಲ್ಲಿ ಇಂಜೆಕ್ಷನ್ ಹಿಡಿದುಕೊಂಡು, ಇನ್ನೊಂದು ಮಲೇರಿಯಾ ರೋಗದ ಬಗ್ಗೆ ಮುಂಜಾಗ್ರತಾ ಕ್ರಮ ಹಾಗೂ ನಿಯಂತ್ರಣದ ಕುರಿತ ಸಂದೇಶ ಸಾರುವ ಫಲಕ ಹಿಡಿದು ವಿಶಿಷ್ಟವಾಗಿ ಗಮನ ಸೆಳೆದರು.
ಇದೇ ಸಂದರ್ಭದಲ್ಲಿ ವಿಟ್ಲಪಿಂಡಿ ಪ್ರಯುಕ್ತ ರಥಬೀದಿಯ ಕನಕ ಗೋಪುರದ ಬಳಿ ಮಲ್ಲಯುದ್ಧ ಪ್ರದರ್ಶನ ನಡೆಯಿತು.






