ಮಂಗಳೂರು ವಿವಿ ಅಂತರ್ ಕಾಲೇಜು ಕರಾಟೆ ಸ್ಪರ್ಧೆ ಉದ್ಘಾಟನೆ

ಉಡುಪಿ, ಸೆ.5: ಮಂಗಳೂರು ವಿಶ್ವವಿದ್ಯಾನಿಲಯ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಹಾಗೂ ಯುವಜನ ಕ್ರೀಡಾ ಸಬಲೀಕರಣ ಇಲಾಖೆಗಳ ಸಂಯುಕ್ತ ಆಶ್ರಯ ದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಕರಾಟೆ ಸ್ಪರ್ಧೆ ಶನಿವಾರ ತೆಂಕನಿಡಿಯೂರು ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡಿತು.
ಸ್ಪರ್ಧೆಯನ್ನುಉದ್ಘಾಟಿಸಿದ ಉಡುಪಿ ಜಿಲ್ಲಾ ಆಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ ಮಾತನಾಡಿ, ಕ್ರೀಡಾ ಮನೋಭಾವದಿಂದ ಸ್ಪರ್ಧಿಗಳು ಕ್ರೀಡೆಯಲ್ಲಿ ಭಾಗವಹಿಸುವಂತೆ ಕಿವಿಮಾತು ಹೇಳಿದರಲ್ಲದೇ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಬಾಗವಹಿಸಿದ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಪ್ರಖ್ಯಾತ್ ಶೆಟ್ಟಿ ಮಾತನಾಡಿ, ಕ್ರೀಡೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಇಂಧನ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ನಿತ್ಯಾನಂದ ವಿ. ಗಾಂವ್ಕರ್, ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಹೊಂದಿದರೆ ವಿದ್ಯಾರ್ಥಿ ಜೀವನದಲ್ಲಿ ಇಟ್ಟ ಗುರಿಗಳನ್ನು ಕ್ಲಪ್ತ ಸಮಯದಲ್ಲಿ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಹರಿಪ್ರಸಾದ್ ರೈ ಅವರ ಪ್ರಾಯೋಜಕತ್ವ ದಲ್ಲಿ ಫ್ರೆಂಡ್ಸ್ ಅಂಬಲಪಾಡಿ ತಂಡ ಹುಲಿವೇಷ ಕುಣಿತದ ಪ್ರದರ್ಶನ ನೀಡಿ ಕ್ರೀಡಾಪಟುಗಳನ್ನು ರಂಜಿಸಿತು.
ಸಹಾಯಕ ಪ್ರಾಧ್ಯಾಪಕಿ ಹಮೀದಾ ಬಾನು, ಹಳೆ ವಿದ್ಯಾರ್ಥಿ ಸಂಘದ ಸಂತೋಷ್ ಸುವರ್ಣ, ರೆಫ್ರಿ ಬೋರ್ಡ್ ಹಿರಿಯ ಉಪಾಧ್ಯಕ್ಷ ಡಾ. ನಿಶಾಂತ್, ಉಡುಪಿ ಜಿಲ್ಲಾ ಟೀಚರ್ಸ್ ಕರಾಟೆ ಅಸೋಸಿಯೇಶನ್ ಅಧ್ಯಕ್ಷರಾದ ರೋಹಿತ್, ಕಾರ್ಯದರ್ಶಿ ವಾಮನ್ ಪಾಲನ್, ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಅಧ್ಯಕ್ಷ ರವಿಕುಮಾರ್ ಉದ್ಯಾವರ, ಮನೋಜ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಕಾಲೇಜಿನ ದೈಹಿಹಕ ಶಿಕ್ಷಣ ನಿರ್ದೇಶಕ ಹಾಗೂ ಯುವಜನ ಕ್ರೀಡಾ ಸಬಲೀಕರಣ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಬಾಲರಾಜ್ ವಂದಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಾರುತಿ ಕಾರ್ಯಕ್ರಮ ನಿರೂಪಿಸಿದರು.






