ಬಸ್-ಸ್ಕೂಟರ್ ಢಿಕ್ಕಿ: ಸವಾರ ಮೃತ್ಯು

ಕೋಟ, ಸೆ.5: ಬಸ್ಸಿನ ಹಿಂಬದಿಗೆ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಬಾಳ್ಕುದ್ರು ಗ್ರಾಮದ ಮಾಬುಕಳ ಬಸ್ಸು ನಿಲ್ದಾಣದ ಬಳಿ ಸೆ.5ರಂದು ಬೆಳಗ್ಗೆ 9ಗಂಟೆಗೆ ನಡೆದಿದೆ.
ಮೃತರನ್ನು ರವಿರಾಜ್ ಎಂದು ಗುರುತಿಸಲಾಗಿದೆ. ಹಿಂಬದಿ ಸವಾರ ಅನಿಲ್ ಗಂಭೀರವಾಗಿ ಗಾಯಗೊಂಡು ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬ್ರಹ್ಮಾವರ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಬಸ್ಸನ್ನು ಚಾಲಕ, ಯಾವುದೇ ಮುನ್ಸೂಚನೇ ನೀಡದೇ ಒಮ್ಮೆಲೇ ಬಸ್ಸು ನಿಲ್ದಾಣದ ಎದುರುಗಡೆ ರಾಷ್ಟೀಯ ಹೆದ್ದಾರಿಯ ಮೇಲೆ ನಿಲ್ಲಿಸಿದ್ದನು. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಸ್ಕೂಟರ್ ಬಸ್ಸಿನ ಹಿಂಬದಿಗೆ ಢಿಕ್ಕಿ ಹೊಡೆದು ಬಸ್ಸಿನಡಿಗೆ ಬಿತ್ತೆನ್ನಲಾಗಿದೆ.
ಇದರಿಂದ ಸವಾರರಿಬ್ಬರು ರಸ್ತೆಗೆ ಬಿದ್ದು ಗಾಯಗೊಂಡರು. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಸವಾರ ರವಿರಾಜ್ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




