ಕೇರಳದ ಸಾಂಸ್ಕೃತಿಕ ವೈಭವ ‘ಓಣಂ ಸಂಭ್ರಮ’

ಉಡುಪಿ, ಸೆ.7: ಕೇರಳ ಸಮಾಜಂ ಉಡುಪಿ ವತಿಯಿಂದ ಎರಡನೇ ವರ್ಷದ ಓಣಂ ಸಂಭ್ರಮಾಚರಣೆಯನ್ನು ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ರವಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಲಯಾಳಂ ಚಿತ್ರರಂಗದ ನಟಿ ನೀನಾ ಕುರುಪ್ ಮಾತನಾಡಿ, ಓಣಂ ಕೇರಳದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಕೇರಳದಾದ್ಯಂತ ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗು ತ್ತದೆ. ಕೇರಳದ ಹೊರಭಾಗದಲ್ಲಿಯೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಓಣಂ ಸಂಭ್ರಮಾಚರಣೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಶುಭ ಹಾರೈಸಿದರು. ಕೇರಳ ಸಮಾಜಂ ಉಡುಪಿ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಕೇರಳದ ಅತಿ ಕಿರಿಯ ವಯಸ್ಸಿನ ಬಾಲ ಗಾಯಕಿ ರಾನಿಯಾ ರಫೀಕ್ ಸುಮಧುರ ಗಾಯನ ಪ್ರಮುಖ ಆಕರ್ಷಣೆ ಯಾಗಿದ್ದು, ಸಂಗೀತ ಪ್ರಿಯರ ಮನಗೆದ್ದಿತು. ಕೇರಳದ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಾದ ತಿರುವಾದಿರ ಮತ್ತು ಮೊಹಿಣಿಯಾಟ್ಟಂ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು. ಇದರೊಂದಿಗೆ ಯುವ ಪೀಳಿಗೆಯ ಫ್ಯಾಷನ್ ಶೋ ಕಾರ್ಯಕ್ರಮದ ಮೆರಗನ್ನು ಮತ್ತಷ್ಟು ಹೆಚ್ಚಿಸಿತು.
ಮಡಿಕೆ ಒಡೆಯುವ ಸ್ಪರ್ಧೆ, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಹೊರಾಂಗಣ ಕ್ರೀಡೆಗಳಲ್ಲೂ ಸಮಾಜ ಬಾಂಧವರು ಹಾಗೂ ಯುವಜನರು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು. ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಟ್ರಸ್ಟಿ ಅಭಿಲಾಶ್ ಪಿವಿ, ಕೇರಳ ಸಮಾಜಂ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಬಿನ್ಸಿ ಎಂ.ಜೊರ್ಜ್ ಉಪಸ್ಥಿತರಿದ್ದರು.






