ಉಡುಪಿ ಎಪಿಎಂಸಿ ಅಧಿಕಾರಿಗಳಿಂದ ಅವ್ಯವಹಾರ ಆರೋಪಿಸಿ ಪ್ರತಿಭಟನೆ

ಉಡುಪಿ, ಸೆ.9: ಉಡುಪಿ ಎ.ಪಿ.ಎಂ.ಸಿ. ಅಧಿಕಾರಿಗಳು ದೌರ್ಜನ್ಯ ಹಾಗೂ ಅವ್ಯವಹಾರ ಎಸಗಿರುವುದಾಗಿ ಆರೋಪಿಸಿ ಉಡುಪಿ ಎಪಿಎಂಸಿ ರಕ್ಷಣಾ ಸಮಿತಿ ವತಿಯಿಂದ ಬುಧವಾರ ಎಪಿಎಂಸಿ ಎದುರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಸಮಿತಿ ಅಧ್ಯಕ್ಷ ವಿಜಯ ಕೊಡವೂರು ಮಾತನಾಡಿ, ಎಪಿಎಂಸಿ ಲೆಕ್ಕಿಗ ಹಾಗೂ ಕಾರ್ಯದರ್ಶಿ ಸೇರಿ ಲಕ್ಷಾಂತರ ರೂ. ಅವ್ಯವಹಾರವನ್ನು ಮಾಡಿದ್ದಾರೆ. ಖಾಲಿ ನಿವೇಶನ ಎಂದು ಹೇಳಿ ಅಭಿವೃದ್ಧಿಪಡಿಸಿದ ನಿತ್ಯ ಮಾರುಕಟ್ಟೆ ನಿವೇಶನವನ್ನು ಅಧಿಕಾರಿಗಳು ಲೀಸ್ ಸೇಲ್ ಹೆಸರಿನಲ್ಲಿ ತಮಗೆ ಬೇಕಾದವರಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗಿದೆ. ಈ ನಿವೇಶನದಲ್ಲಿರುವ ಲಕ್ಷಾಂತರ ಮೌಲ್ಯದ ಇಂಟರ್‌ಲಾಕ್ ಮತ್ತು ಶೆಡ್‌ಗಳು ಮತ್ತು ಮರಗಳನ್ನು ನಾಶಪಡಿಸಲಾಗಿದೆ ಎಂದು ದೂರಿದರು.
ಅಭಿವೃದ್ಧಿಪಡಿಸಿದ ನಿತ್ಯಮಾರುಕಟ್ಟೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ದಾಸ್ತಾನು ಮಳಿಗೆಗಳನ್ನು ನಿರ್ಮಿಸಲಾ ಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ದೂರು ಕೊಟ್ಟರೂ ಶರತ್ತುಗಳ ಪ್ರಕಾರ ಈ ಅಕ್ರಮ ಕಾಮಗಾರಿ ಯನ್ನು ರದ್ದು ಪಡಿಸುತ್ತಿಲ್ಲ. ಇಲ್ಲಿ ಇರುವ ಸುಮಾರು 175 ನಿತ್ಯ ಹರಾಜು ಕಟ್ಟೆಗಳಲ್ಲಿ ಕೆಲವು ಕಡೆಗಳಲ್ಲಿ ಕೆಲವು ವರ್ತಕರು ಯಾವುದೇ ಪರವಾನಗಿ ಪಡೆಯದೆ ವ್ಯಾಪಾರಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ದಿನದ 24 ಗಂಟೆ ಅವ್ಯವಹಾರ ಹಾಗೂ ಜುಗಾರಿ ದಂಧೆಗಳು ನಡೆಯುತ್ತಿವೆ. ಭದ್ರತಾ ಸಿಬ್ಬಂದಿಗಳು ಸರಿಯಾಗಿ ಕೆಲಸವನ್ನು ಮಾಡುತ್ತಿಲ್ಲ. ಒಳಗೆ ಕಳ್ಳಕಾಕರು ತುಂಬಿಕೊಂಡಿದ್ದಾರೆ. ಎಪಿಎಂಸಿ ಜಾಗಕ್ಕೆ ಮೂಲದಾಖಲೆಗಳೂ ಇರುವುದಿಲ್ಲ. ಇಲ್ಲಿನ ಭ್ರಷ್ಟಾಚಾರ ವನ್ನು ನಿಲ್ಲಿಸಿ ಅದಿಉಡುಪಿಯ ಎಪಿಎಂಸಿ ಮಾರುಕಟ್ಟೆಯನ್ನು ರಕ್ಷಿಸಬೇಕು ಮತ್ತು ಸಾಮಾನ್ಯ ವರ್ತಕರಿಗೆ ಮತ್ತು ಗ್ರಾಹಕರಿಗೆ ನ್ಯಾಯವನ್ನು ಒದಗಿಸಿ ಕೊಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಕೃಷಿ ಉತ್ಪನ್ನ ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ಸುಭಾಷಿತ್ ಕುಮಾರ್, ಉಡುಪಿ ಬಿಜೆಪಿ ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ಪ್ರಮುಖರಾದ ನಟೇಶ್, ರಮಾಕಾಂತ್ ಕಾಮತ್, ಪ್ರಭುಗೌಡ, ಫಯಾಜ್, ಜಗಳೂರಯ್ಯ ರಮಾನಾಥ ಪೈ, ರಾಧಾಕೃಷ್ಣ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.






