ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ; ಸರ್ವಾಧ್ಯಕ್ಷರಾಗಿ ಡಾ.ವೈ.ಎನ್.ಶೆಟ್ಟಿ ಆಯ್ಕೆ

ಕಾಪು, ಸೆ.9: ಕಾಪು ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅ.3ರಂದು, ನಡೆಯಲಿರುವ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಾನಪದ ಸಂಶೋಧಕ ಡಾ. ವೈ.ಎನ್.ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಕನ್ನಡ ಸಾತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ತಿಳಿಸಿದ್ದಾರೆ.
ತುಳುನಾಡಿನ, ಶೇಷವಾಗಿ ಕಾಪು ತಾಲ್ಲೂಕಿನ ಜಾನಪದ, ಪರಂಪರೆ ಮತ್ತು ಇತಿಹಾಸಕ್ಕೆ ಸಂಬಂಧಪಟ್ಟಂತೆ ಕರಾರು ವಕ್ಕಾಗಿ ದಾಖಲೆಸಹಿತ ಮಾಹಿತಿ ಯನ್ನು ಒದಗಿಸುವ ಕೆಲವೇ ವಿದ್ವಾಂಸರಲ್ಲಿ ಒಬ್ಬರಾಗಿರುವ ಡಾ.ವೈ.ಎನ್. ಶೆಟ್ಟಿ, ನಿರಂತರ ಅಧ್ಯಯನಶೀಲರು. ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಅವರು, 20 ವರ್ಷಗಳ ಅವಧಿಯಲ್ಲಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿ, ವೈದ್ಯಕೀಯ ಅಧೀಕ್ಷಕರಾಗಿ, ರಾಜೀವ ಗಾಂಧಿ ವೈದ್ಯಕೀಯ ಮಹಾವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, 17 ವರ್ಷಗಳ ಕಾಲ ಎನ್.ಐ.ಟಿ.ಕೆ ಆರೋಗ್ಯ ಕೇಂದ್ರದಲ್ಲಿ ಸಂದರ್ಶನ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




