ರಂಗ ಬಾಂಧವ್ಯದಿಂದ ವಿನೂತನ ಅನುಭವದ ಪ್ರಾಪ್ತಿ: ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ, ಸೆ.9: ರಂಗಚಟುವಟಿಕೆಗಳ ನಿರಂತರೆಯಿಂದ ರಂಗಭೂಮಿ ಸದೃಢ ಮತ್ತು ವಿಸ್ತಾರಗೊಳ್ಳುತ್ತದೆ. ಇಲ್ಲಿ ಪರಸ್ಪರ ಬಾಂಧವ್ಯವನ್ನಿರಿಸಿ ಕೊಂಡಾಗ ಅನುಭವ, ಕಲಿಕೆಯ ಹೊಸ ಸಾಧ್ಯತೆಗಳು ಪ್ರಾಪ್ತಿಯಾಗುತ್ತದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ.
ಸುಮನಸಾ ಕೊಡವೂರು ರಜತ ಸಂಭ್ರಮದ ಪ್ರಯುಕ್ತ ಉಡುಪಿ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾದ ರಂಗತಂಡಗಳ ಮತ್ತು ರಂಗ ಕಲಾವಿದರ ಸ್ನೇಹ ಸಮ್ಮಿಲನ ‘ರಂಗ ಸಾರೂಪ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ತರತರಹ ಆಕಾರದ ಬೆರಳು ಮುಷ್ಟಿಯಾಗಿ ಒಗ್ಗಟ್ಟಿನ ಸೃಷ್ಟಿಯೆನಿಸಿದರೆ ಅದರ ಜೊತೆ ಸೇರುವ ಕೈಗಳು ಸಾಮೂಹಿಕ ಸಮಭಾವದ ಸಮಷ್ಟಿಯಾಗುವ ಮಹದಾಶಯದ ಸಾಮ್ಯತೆಯ ಸಂಕಲ್ಪವೇ ಸುಮನಸಾ ರಂಗಸಾ ರೂಪ್ಯ’ ಎನ್ನುವ ವಿಶೇಷ ಪರಿಕಲ್ಪನೆಯನ್ನು ಉದ್ಘಾಟಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ರಜತಸಂಭ್ರಮದ ಅಧ್ಯಕ್ಷ ಹರಿಪ್ರಸಾದ್ ರೈ ಮಾತನಾಡಿ, ಉಡುಪಿಯ ಸಾಂಸ್ಕೃತಿಕ ಉನ್ನತಿಗೆ ಸುಮನಸಾದ ಕೊಡುಗೆಯೂ ಅನನ್ಯವಾದುದು. ರಂಗಭೂಮಿ ನಿಂತ ನೀರಾಗಬಾರದೆನ್ನುವ ನಿಟ್ಟಿನಲ್ಲಿ ಹೊಸ ಅಲೋಚನೆಗಳೊಂದಿಗೆ ಭವಿಷ್ಯಕ್ಕೆ ಪೂರಕವಾದ ಕಾರ್ಯಕ್ರಮಗಳು ಸುಮನಸಾದ ಮೂಲಕ ಜರಗುತ್ತಿರುವುದು ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ರಜತಸಂಭ್ರಮದ ಉಪಾಧ್ಯಕ್ಷರಾದ ದಿವಾಕರ್ ಸನಿಲ್, ಮಹಮ್ಮದ್ ಮೌಲಾ, ಸಲಹೆಗಾರಾದ ಸುಕನ್ಯಾ ಮಾರ್ಟಿಸ್, ಡಾ.ಸುನಿತಾ ವಿ. ಹಾಗೂ ಸುಮನಸಾ ಸಂಚಾಲಕರ ಭಾಸ್ಕರ್ ಪಾಲನ್ ಬಾಚನಬೈಲು, ಗೌರವಾಧ್ಯಕ್ಷ ಎಂ.ಎಸ್.ಭಟ್, ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಕಾರ್ಯಕ್ರಮ ಸಂಯೋಜಕ ದಿವಾಕರ್ ಕಟೀಲ್, ಯೋಗೀಶ್ ಕೊಳಲಗಿರಿ ಉಪಸ್ಥಿತರಿದ್ದರು.
ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು, ದಯಾನಂದ ಕರ್ಕೇರ ಪ್ರಸ್ತಾವಿಕ ಮಾತನ್ನಾಡಿ ದರು. ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿ ದರು. ಸಭಾಕಾರ್ಯಕ್ರಮದ ಆರಂಭದಲ್ಲಿ ಜರ್ನಿ ಥಿಯೇಟರ್ ಮಂಗಳೂರು ತಂಡದವರಿಂದ ರಂಗ ಸಂಗೀತ ಹಾಗೂ ನಂತರ ಸುಮನಸಾ ಕಲಾವಿದರಿಂದ ರಂಗಸಂಗೀತ ನೆರವೇರಿತು.






