ನಗರ ಪ್ರಾಧಿಕಾರಗಳ ಒಕ್ಕೂಟದ ನಿಯೋಗದಿಂದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಭೇಟಿ

ಉಡುಪಿ, ಸೆ.9: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಪ್ರಾಧಿಕಾರಗಳ ಒಕ್ಕೂಟದ ಪದಾಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಮಂಗಳೂರು ಸರ್ಕ್ಯುಟ್ ಹೌಸ್‌ನಲ್ಲಿ ಭೇಟಿ ಮಾಡಿತು.
9/11 ಸಮಸ್ಯೆ, ಕನ್ವರ್ಷನ್, ವಿನ್ಯಾಸ ನಕ್ಷೆ ಅನುಮೋದನೆ, ಕಟ್ಟಡ ಪರವಾನಿಗೆ ಮೊದಲಾದ ಸಮಸ್ಯೆಗಳಿಗೆ ಪರಿಹಾರಕಂಡು ಕೊಳ್ಳಲು, ಕರಾವಳಿ ಜಿಲ್ಲೆಗಳಿಗೆ ಏಕ ರೂಪ ನಿಯಮವನ್ನು ಪಾಲಿಸಲು ಪ್ರತ್ಯೇಕ ವಲಯ ನಿಯಮಾ ವಳಿ ರಚಿಸಬೇಕು. ಪ್ರಸ್ತುತ ಕರಾವಳಿ ಜಿಲ್ಲೆಗಳು ಮೈಸೂರು ವಿಭಾಗಕ್ಕೆ ಸೇರಿದ್ದು ಮಂಜೂರಾತಿ ವಿಳಂಬವಾಗುತ್ತಿದೆ. ಮಂಗಳೂರಿನಲ್ಲಿ ಜಂಟಿ ನಿರ್ದೇಶಕರ ಕಚೇರಿ ಸ್ಥಾಪಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ನಿಯೋಗ ಬೇಡಿಕೆಗಳನ್ನು ಸಲ್ಲಿಸಿತು.
ಈ ಸಂದರ್ಭದಲ್ಲಿ ಒಕ್ಕೂಟದ ಸಂಚಾಲಕ ಉಡುಪಿ ನಗರಾಭಿವೃದ್ಧಿ ಅಧ್ಯಕ್ಷ ದಿನಕರ ಹೇರೂರು, ಒಕ್ಕೂಟದ ಸಂಚಾಲಕ ಸುಳ್ಯ ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ ಸುಳ್ಯ, ಮೂಡಬಿದ್ರಿ ನಗರ ಯೋಜನಾ ಪ್ರಾಧಿಕಾರ ಸದಸ್ಯ ಶೇಖರ ಪೂಜಾರಿ, ಉಡುಪಿ ಪ್ರಾಧಿಕಾರ ಸದಸ್ಯ ಗಿರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.




