ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ: ಮಾಹಿತಿ ಕಾರ್ಯಾಗಾರ

ಉಡುಪಿ, ಸೆ.9: ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಶ್ರಯದಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯ ಅಂಗವಾಗಿ ಮಾಹಿತಿ ಕಾರ್ಯಾಗಾರವನ್ನು ಬುಧವಾರ ಕಾರ್ಕಳ ಡಾ.ಎ.ವಿ.ಬಾಳಿಗಾ ಸಮುದಾಯ ಆಪ್ತ ಸಮಾಲೋಚನಾ ಮತ್ತು ಮಕ್ಕಳ ಮಾರ್ಗದರ್ಶನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಆರೋಗ್ಯ ಅಧಿಕಾರಿ ಡಾ.ಸಂದೀಪ್ ಕುಡ್ವ ಮಾತನಾಡಿ, ಆತ್ಮಹತ್ಯೆ ತಡೆಗಟ್ಟುವಲ್ಲಿ ಪ್ರತಿಯೊಬ್ಬರ ಪಾತ್ರವೂ ಮಹತ್ವದ್ದಾಗಿದೆ. ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವ ವ್ಯಕ್ತಿ ಯೊಂದಿಗೆ ಮುಕ್ತವಾಗಿ ಮಾತನಾಡುವುದು. ಅವರ ಮಾತುಗಳನ್ನು ಆಲಿಸುವುದು ಹಾಗೂ ಅಗತ್ಯವಿದ್ದಾಗ ಸೂಕ್ತ ಮಾನಸಿಕ ಆರೋಗ್ಯ ಸೇವೆಗಳಿಗೆ ಸಂಪರ್ಕ ಕಲ್ಪಿಸುವುದು ಅತ್ಯಂತ ಮುಖ್ಯ. ಆತ್ಮಹತ್ಯೆಯ ಕುರಿತು ಸಮಾಜ ದಲ್ಲಿರುವ ತಪ್ಪು ನಂಬಿಕೆಗಳನ್ನು ದೂರ ಮಾಡಿ, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಅಧ್ಯಕ್ಷತೆಯನ್ನು ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ವಹಿಸಿದ್ದರು. ವೃಂದ ಸ್ವಾಗತಿಸಿದರು. ಡಾ.ಸಂದೀಪ್ ಕುಡ್ವ ಪರಿಚಯ ಮಾಡಿದರು. ನಂತರ ಆತ್ಮಹತ್ಯೆಯ ಕುರಿತು ಇರುವ ತಪ್ಪು ನಂಬಿಕೆಗಳು ಎಂಬ ವಿಷಯದ ಕುರಿತು ಆಪ್ತ ಸಮಾಲೋಚಕಿ ದೀಪಶ್ರೀ ಆತ್ಮಹತ್ಯೆಯ ಲಕ್ಷಣಗಳು ಮತ್ತು ಅದನ್ನು ತಡೆಗಟ್ಟುವ ಮಾರ್ಗಗಳು ಎಂಬ ವಿಷಯದ ಕುರಿತು ಮನೋಸಾಮಾಜಿಕ ತಜ್ಞೆ ವಿದ್ಯಾಶ್ರೀ ಮಾಹಿತಿ ನೀಡಿದರು.
ವಿದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಫಾರ್ಮಸಿಸ್ಟ್ ರವಿ ಕೆಡ್ಲಾಯ ವಂದಿಸಿದರು. ಕಾರ್ಕಳ ಸರಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಚಿಕಿತ್ಸೆಗೆ ಆಗಮಿಸಿದ ಮಾನಸಿಕ ಆರೋಗ್ಯ ಕೇಂದ್ರದ ಗ್ರಾಹಕರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.






