ಕೆಲಸದ ಒತ್ತಡ ತಾಳಲಾರದೆ ಬ್ಯಾಂಕ್ ನೌಕರರು ಆತ್ಮಹತ್ಯೆ: ನಾಗೇಶ್ ನಾಯಕ್
ವಾರದಲ್ಲಿ 5 ದಿನ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಮುಷ್ಕರ

ಉಡುಪಿ, ಸೆ.11: ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟ(ಯುಎಫ್‌ಬಿಯು)ದ ನೇತೃತ್ವದ ಅಖಿಲ ಭಾರತ ಬ್ಯಾಂಕ್ ಮುಷ್ಕರದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕಿನ ಎದುರು ಧರಣಿ ನಡೆಸಲಾಯಿತು.
ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೂಡಲೇ ಜಾರಿಗೊಳಿಸಬೇಕು. ಎಲ್ಲ ಬ್ಯಾಂಕ್‌ಗಳ ನೌಕರರ ನಡುವೆ ಒಂಮದಜೇ ರೀತಿಯ ಹುದ್ದೆ ಮತ್ತು ಶ್ರೇಣಿಗೆ ಸಮಾನವಾದ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕವನ್ನು ಒದಗಿಸಬೇಕು. ಅದೇ ರೀತಿ ಬಾಕಿ ಉಳಿದಿರುವ ಎಲ್ಲ ಭರವಸೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟದ ಜಿಲ್ಲಾ ಸಂಚಾಲಕ ನಾಗೇಶ್ ನಾಯಕ್ ಮಾತನಾಡಿ, ಕೆಲಸದ ಒತ್ತಡ ತಾಳಲಾರದೆ ನೌಕರರು ಆತ್ಮಹತ್ಯೆಯಂತಹ ಕಠಿಣ ಹಾದಿ ಹಿಡಿಯುತ್ತಿರುವುದು ಅತ್ಯಂತ ಬೇಸರದ ಸಂಗತಿ. ಬ್ಯಾಂಕ್ ನೌಕರರ ಸಂಕಷ್ಟವನ್ನು ಅರ್ಥಮಾಡಿಕೊಳ್ಳುವವರು ಇಲ್ಲದಂತಾಗಿದೆ. ತೀವ್ರ ಒತ್ತಡದ ನಡುವೆಯೇ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬ್ಯಾಂಕಿನ ಮೊದಲ ಸಾಲಿನಲ್ಲಿರುವ ನೌಕರರು ಮತ್ತು ಅಧಿಕಾರಿಗಳು ನಿತ್ಯ ಗ್ರಾಹಕರಿಗೆ ಸೇವೆ ನೀಡುತ್ತಾರೆ. ಆದರೆ ಮೇಲಾಧಿಕಾರಿಗಳು ಎಸಿ ಕೊಠಡಿಗಳಲ್ಲಿ ಕುಳಿತುಕೊಂಡು ಯಾವುದೇ ಕೆಲಸ ಮಾಡುತ್ತಿಲ್ಲ. ಯಾವುದೇ ಕೆಲಸ ಮಾಡದವರಿಗೆ ಪಿಎಲ್‌ಐ ಹೆಸರಿನಲ್ಲಿ ದೊಡ್ಡ ಮೊತ್ತದ ಪ್ರೋತ್ಸಾಹಧನ ನೀಡಲಾಗುತ್ತಿದೆ. ಆದರೆ ನಿತ್ಯ ಗ್ರಾಹಕರ ಸೇವೆಯಲ್ಲಿ ತೊಡಗಿರುವ ನೌಕರರಿಗೆ ಅನ್ಯಾಯ ಮಾಡಲಾಗುತ್ತಿದೆ. ಸರಕಾರ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ’ ಎಂಬ ರೀತಿಯಲ್ಲಿ ವರ್ತಿಸುತ್ತಿದೆ. ಈ ತಾರತಮ್ಯದ ನೀತಿಯ ವಿರುದ್ಧ ಹೋರಾಡುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.
ಧರಣಿಯಲ್ಲಿ ಎಐಬಿಇಎಯ ಹರೀಶ್ ಶೆಟ್ಟಿ, ಎಐಬಿಓಸಿಯ ಸಚಿನ್ ಶೆಟ್ಟಿ, ಎನ್‌ಸಿಬಿಇಯ ಮುರಳೀಧರ, ಸುಪ್ರಿಯಾ, ಎಐಓಬಿಎಯ ರವಿ ಶಂಕರ್, ಐಎನ್‌ಬಿಓಸಿಯ ಪ್ರಮೋದ್ ಲಾಂಜೆ, ಮುಖಂಡರಾದ ಸುದೀಪ, ಮನೋಜ್ ಕುಮಾರ್, ರಮೇಶ್ ನಿರಂಜನ್, ಮರಿಯೋ ಮಥಾಯಿಸ್, ಪ್ರಣವ್ ಪೈ, ಸಂತೋಷ್, ಮಂಜುನಾಥ್, ಸಚಿನ್ ಚಾಪರ್, ಸೂರಜ್ ಉಪಸ್ಥಿತರಿದ್ದರು.
‘ನೌಕರರು ನಿರಂತರ ಒತ್ತಡದ ಬದುಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಾರದಲ್ಲಿ ಎರಡು ದಿನಗಳ ವಿಶ್ರಾಂತಿ ಅತ್ಯಗತ್ಯವಾಗಿದೆ. ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವುದು ನೌಕರರ ಬಹುದಿನಗಳ ಬೇಡಿಕೆಯಾಗಿದೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸಬೇಕಾಗುತ್ತದೆ’
-ನಾಗೇಶ್ ನಾಯಕ್, ಜಿಲ್ಲಾ ಸಂಚಾಲಕರು, ಯುಎಫ್‌ಬಿಯು






