ಎಸ್‌ಐಆರ್: ವಾಸ್ತವ್ಯ ದೃಢೀಕರಣ ಪತ್ರ ಸಮಸ್ಯೆ ಬಗೆಹರಿಸಲು ಮನವಿ

ಉಡುಪಿ, ಸೆ.11: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ನೈಜ ಮತದಾರರಿಗೆ ವಾಸ್ತವ್ಯ ದೃಢೀಕರಣ ಪತ್ರ ಪಡೆಯುವಲ್ಲಿ ಉಂಟಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ಮತದಾರರ ವಿವರಗಳಲ್ಲಿನ ವ್ಯತ್ಯಾಸ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಮತದಾರರಿಗೆ ನೋಟಿಸ್ ಬಂದಿದೆ. ನೋಟಿಸ್‌ನಲ್ಲಿ ಸೂಚಿಸಿದ ದಾಖಲೆಗಳು ಮತದಾರರಲ್ಲಿ ಇಲ್ಲದಿದ್ದಾಗ ಚುನಾವಣಾ ಆಯೋಗವು ಮಾನ್ಯ ಮಾಡುವ ವಾಸ್ತವ್ಯ ದೃಢೀಕರಣ ಪತ್ರಕ್ಕಾಗಿ ಸ್ಥಳೀಯ ಕಂದಾಯ ಅಧಿಕಾರಿಗಳ ಬಳಿ ಹೋದಾಗ ವಿವಿಧ ಕಾರಣಗಳನ್ನು ನೀಡಿ ಸತಾಯಿಸಿದ ಬಹಳಷ್ಟು ನಿದರ್ಶನಗಳು ಕಂಡುಬಂದಿವೆ.
ಬಾಡಿಗೆ ಮನೆಗಳಲ್ಲಿ ವಾಸಿಸುವರು ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸಿಸುತ್ತಿದ್ದರೂ ಸೂಕ್ತ ದಾಖಲೆ ಗಳನ್ನು ಹೊಂದಿರದವರು ಹಳೆಯ ದಾಖಲೆಗಳಲ್ಲಿ ವಿಳಾಸದ ವ್ಯತ್ಯಾಸ ಹೊಂದಿರುವ ಮತದಾರರು ಅನಗತ್ಯವಾಗಿ ಪ್ರತಿನಿತ್ಯ ಕಂದಾಯ ಕಛೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಮತದಾನದ ಸಾಂವಿಧಾನಿಕ ಹಕ್ಕಿನಿಂದ ಯಾರೊಬ್ಬರೂ ವಂಚಿತರಾಗದಂತೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗದಂತೆ ಎಸ್‌ಐಆರ್‌ಗೆ ಸಂಬಂಧಿಸಿದಂತೆ ಅರ್ಹ ನಾಗರಿಕರು ವಾಸ್ತವ್ಯ ದೃಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ಕೂಡಲೇ ನಿಯಮಾನುಸಾರ ಅದನ್ನು ನೀಡಲು ಸೂಕ್ತ ನಿರ್ದೇಶನ ನೀಡುವಂತೆ ಮನವಿಯಲ್ಲಿ ಒತ್ತಾಯಿಸ ಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕಾಂಗ್ರೆಸ್ ಪಕ್ಷದ ನಾಯಕರಾದ ಮಹಾ ಬಲ ಕುಂದರ್, ಕೃಷ್ಣ ಹೆಬ್ಬಾರ್, ಹರಿಪ್ರಸಾದ್ ರೈ, ಗಣೇಶ್ ನೆರ್ಗಿ, ಸತೀಶ್ ಕೊಡವೂರು, ಸುಕೇಶ್ ಕುಂದರ್, ಸತೀಶ್ ಕುಮಾರ್ ಮಂಚಿ, ಶಶಿರಾಜ್ ಕುಂದರ್, ಲಕ್ಷ್ಮಣ್ ಪೂಜಾರಿ, ಮಮತಾ ಶೆಟ್ಟಿ, ಆಶಾ ಚಂದ್ರಶೇಖರ್, ಸಂಧ್ಯಾ ತಿಲಕ್‌ರಾಜ್, ಸದಾನಂದ್ ಕುಲಾಲ್, ಆರೀಫ್, ಬೋನಿಫಾಸ್, ಭರತ್ ಕುಮಾರ್, ಶಕುಂತಲಾ, ದಯಾನಂದ್ ಹಾಗೂ ಸಂಜಯ್ ಆಚಾರ್ಯ ಉಪಸ್ಥಿತರಿದ್ದರು.






