ಹೆಮ್ಮಾಡಿ ಉಪ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಆಗ್ರಹಿಸಿ ಧರಣಿ

ಕುಂದಾಪುರ, ಸೆ.15: ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಹೆಮ್ಮಾಡಿ ಹಾಗೂ ಸುತ್ತಮುತ್ತಲಿನ ಐದು ಗ್ರಾಮಗಳ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವ ಹೆಮ್ಮಾಡಿ ಉಪ ಆರೋಗ್ಯ ಕೇಂದ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿ, 24 ಗಂಟೆಗಳ ವೈದ್ಯಕೀಯ ಸೇವೆ ಒದಗಿಸಲು ತಕ್ಷಣ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಪಿಎಂ ಹೆಮ್ಮಾಡಿ ಶಾಖೆಯ ನೇತೃತ್ವದಲ್ಲಿ ಮಂಗಳವಾರ ಹೆಮ್ಮಾಡಿ ಗ್ರಾಮ ಪಂಚಾಯತ್ ಎದುರು ಧರಣಿ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸ್ಥಳೀಯ ಸಿಪಿಎಂ ಮುಖಂಡ ಸಂತೋಷ್ ಹೆಮ್ಮಾಡಿ, ಹಲವು ವರ್ಷಗಳ ಹೋರಾಟದ ಫಲವಾಗಿ ಹೆಮ್ಮಾಡಿಯಲ್ಲಿ ಉಪ ಆರೋಗ್ಯ ಕೇಂದ್ರ ಮಂಜೂರಾಗಿದೆ. ಆದರೆ ಇಲ್ಲಿ ವಾರಕ್ಕೊಂದು ಅಥವಾ ಎರಡು ಬಾರಿ ಮಾತ್ರ ವೈದ್ಯರು ಲಭ್ಯವಿರುತ್ತಾರೆ. ಇದರಿಂದ ಹೆಮ್ಮಾಡಿ ಸೇರಿದಂತೆ ಸುತ್ತಮುತ್ತಲಿನ ಐದು ಗ್ರಾಮಗಳ ಜನರು ತುರ್ತು ಹಾಗೂ ಮೂಲಭೂತ ಆರೋಗ್ಯ ಸೇವೆಗಾಗಿ ದೂರದ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ ಎಂದು ಹೇಳಿದರು.
ಹೆಮ್ಮಾಡಿ ಉಪ ಆರೋಗ್ಯ ಕೇಂದ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿ, ಖಾಯಂ ವೈದ್ಯರು, ಅಗತ್ಯ ಸಿಬ್ಬಂದಿ, ಪ್ರಯೋಗಾಲಯ ಹಾಗೂ 24 ಗಂಟೆಗಳ ತುರ್ತು ವೈದ್ಯಕೀಯ ಸೇವೆ ಒದಗಿಸುವ ಕುರಿತು ಮಂಗಳೂರಿನಲ್ಲಿ ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಮಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಜನರ ಮೂಲಭೂತ ಬೇಡಿಕೆಗಳು ಮತ್ತು ಅಭಿವೃದ್ಧಿ ಪ್ರಶ್ನೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದರೆ ಜಿಲ್ಲೆಯ ಸಂಪತ್ತನ್ನು ಪಿಪಿಪಿ ಮಾದರಿಯಲ್ಲಿ ಖಾಸಗಿ ಬಂಡವಾಳ ಶಾಹಿಗಳ ಕೈಗೆ ಒಪ್ಪಿಸುವಂತಹ ನಿರ್ಧಾರಗಳಿಗೆ ಮಾತ್ರ ಆದ್ಯತೆ ನೀಡಿದರೆ ಅದರಿಂದ ಸಾಮಾನ್ಯ ಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.
ಜಿಲ್ಲೆಯ ಹಲವು ಗ್ರಾಮಗಳಲ್ಲಿ ಆರೋಗ್ಯ ಕೇಂದ್ರಗಳಿದ್ದರೂ ಖಾಯಂ ವೈದ್ಯರು, ಅಗತ್ಯ ಸಿಬ್ಬಂದಿ ಹಾಗೂ ಪ್ರಯೋಗಾಲಯದಂತಹ ಮೂಲ ಭೂತ ಸೌಲಭ್ಯಗಳ ಕೊರತೆ ಇದೆ. ಇದರಿಂದ ಆದಾಯ ಕಡಿಮೆ ಇರುವ ಕೂಲಿಕಾರರು ಹಾಗೂ ಕಾರ್ಮಿಕರು ಸಣ್ಣಪುಟ್ಟ ಅನಾರೋಗ್ಯಕ್ಕೂ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಸಾವಿರಾರು ರೂಪಾಯಿ ಖರ್ಚು ಮಾಡುವಂತಾಗಿದೆ. ಜನರಿಗೆ ಉಚಿತ ಹಾಗೂ ಗುಣಮಟ್ಟದ ಸರ್ಕಾರಿ ಆರೋಗ್ಯ ಸೇವೆ ಒದಗಿಸುವ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳಬಾರದು ಎಂದು ಅವರು ಹೇಳಿದರು.
ಸಿಪಿಎಂ ಮುಖಂಡರಾದ ಎಚ್. ನರಸಿಂಹ ಹಾಗೂ ಚಂದ್ರಶೇಖರ ವಿ. ಮಾತನಾಡಿದರು. ನಂತರ ಹೆಮ್ಮಾಡಿ ಗ್ರಾಪಂ ಆಡಳಿತಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ದಿನೇಶ್ ಆಚಾರ್ಯ, ಶೇಖರ್, ಭಾಸ್ಕರ, ಗಣೇಶ್ ಆಚಾರ್ಯ ವಾಸು ಮೊದಲಾದವರು ಉಪಸ್ಥಿತರಿದ್ದರು. ಸಂತೋಷ್ ಹೆಮ್ಮಾಡಿ ಸ್ವಾಗತಿಸಿ, ನರಸಿಂಹ ಹೆಮ್ಮಾಡಿ ವಂದಿಸಿದರು.






