ಅಧಿಕಾರ ರಾಜಕಾರಣದ ಮಧ್ಯೆ ಸರಳತೆಯ ದೊಡ್ಡ ರೂಪಕ ಓಸ್ಕರ್ ಫೆರ್ನಾಂಡಿಸ್: ದಯಾನಂದ

ಉಡುಪಿ, ಸೆ.15: ರಾಜಕಾರಣ ಅಂತ ಹೇಳಿದರೆ ಅದು ಅಧಿಕಾರದ ಕುರ್ಚಿಯನ್ನು ಹಿಡಿಯುವಂತಹ ಒಂದು ವ್ಯವಸ್ಥೆ. ಆದರೆ ನಗರಸಭೆಯ ಸದಸ್ಯನಾಗಿ ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಓಸ್ಕರ್ ಫೆರ್ನಾಡಿಸ್ ದೇಶದ ಅತ್ಯುನ್ನತ ರಾಜಕಾರಣದಲ್ಲಿ ಸಕ್ರಿಯರಾಗಿದ್ದರೂ ಕೂಡ ಮೂಲವಾಗಿ ಅವರೊಳಗೆ ಅಡಕವಾಗಿದ್ದ ಸರಳತೆಯನ್ನು ಅವರು ಎಂದೂ ಬಿಟ್ಟು ಕೊಡಲಿಲ್ಲ ಎಂದು ಉಡುಪಿ ಸರಕಾರಿ ಹೆಮ್ಮಕ್ಕಳ ಪದವಿಪೂರ್ವ ಕಾಲೇಜಿನ ವಿಶ್ರಾಂತ ಉಪನ್ಯಾಸಕ ದಯಾನಂದ ಡಿ.ಕಿದಿಯೂರು ಹೇಳಿದ್ದಾರೆ.
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಜರಗಿದ ಸಂಸ್ಥೆಯ ಗೌರವಾಧ್ಯಕ್ಷರಾಗಿದ್ದ ಓಸ್ಕರ್ ಫೆರ್ನಾಂಡಿಸ್ ಅವರ ಐದನೇ ಪುಣ್ಯತಿಥಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಸಾಮಾನ್ಯ ಕಾರ್ಯಕರ್ತನನ್ನು ಕೂಡ ಹೆಸರು ಹಿಡಿದು ಕರೆದು ಮಾತಾಡಬಲ್ಲಂತ ಒಂದು ಮನೋಭಾವ ಅವರಲ್ಲಿ ಇತ್ತು ಹಾಗಾಗಿ ಈಗಿರುವ ಅಧಿಕಾರ ರಾಜಕಾರಣದ ಮಧ್ಯೆ ಸರಳತೆಯ ದೊಡ್ಡ ರೂಪಕವಾಗಿ ಓಸ್ಕರ್ ಫೆರ್ನಾಂಡಿಸ್ ವರು ನಮ್ಮ ಎದುರು ನಿಲ್ಲುತ್ತಾರೆ. ಅಂತಹ ಒಬ್ಬ ನಾಯಕನನ್ನು ಇನ್ನು ಮುಂದೆ ನಾವು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ನೋಡಲು ಸಾಧ್ಯವಿಲ್ಲ ಎಂದರು.
ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಿಯಾಜ್ ಪಳಿ, ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಚಂದ್ರಾವತಿ ಎಸ್.ಭಂಡಾರಿ, ಯು.ಪದ್ಮನಾಭ ಕಾಮತ್, ಕೋಶಾಧಿಕಾರಿ ಸತೀಶ್ ಡಿ.ಸಾಲ್ಯಾನ್, ಸಂಸ್ಥೆಯ ಸದಸ್ಯರಾದ ಸೋಮಶೇಖರ್ ಸುರತ್ಕಲ್, ಆಶಾವಾಸು, ಸರೋಜ ಅನುಪ್, ಅಜಿತ್ ಮೆಂಡನ್, ಶ್ರೀಧರ್ ಮಾಬಿಯಾನ್, ತಿಲಕ್‌ರಾಜ್ ಸಾಲಿಯಾನ್ ಮಹಮ್ಮದ್ ಆಲಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆ ಅಂಗಡಿ ಸ್ವಾಗತಿಸಿದರು. ತಿಲಕ್ ರಾಜ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು






