ಜನಪರ ಹೋರಾಟಗಾರರನ್ನು ಧಮನಿಸಲು ಯುಎಪಿಎ ಕಾಯ್ದೆ ರಾಜಕೀಯ ದಾಳವಾಗಿ ಬಳಕೆ: ಪ್ರೊ.ಫಣಿರಾಜ್

ಉಡುಪಿ, ಸೆ.15: ಪ್ರಭುತ್ವ ಹಾಗು ಅಧಿಕಾರಸ್ಥ ಸಮುದಾಯಗಳ ಅನ್ಯಾಯ ದಬ್ಬಾಳಿಕೆಗಳ ವಿರುದ್ಧ ಧ್ವನಿ ಎತ್ತಿ ಹೋರಾಟಕ್ಕೆ ಇಳಿವವರನ್ನು ಧಮನಿಸಲು ಯುಎಪಿಎ ಹಾಗೂ ಎನ್‌ಎಸ್‌ಎ ಕಾಯ್ದೆಗಳನ್ನು ರಾಜಕೀಯ ವಾಗಿ ಬಳಸಲಾಗುತ್ತಿದೆ. ಆ ಮೂಲಕ ಸಂವಿಧಾನಿಕ ಹಕ್ಕುಗಳ ಧಮನಕ್ಕೆ ಶಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಆರೋಪಿಸಿದ್ದಾರೆ.
ಸಹಬಾಳ್ವೆ ಉಡುಪಿ ಜಿಲ್ಲೆ, ದಸಂಸ(ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ, ಸಾಲಿಡ್ಯಾರಿಟಿ ಯೂಥ್ ಮೂವ್ಮೆಂಟ್ ಹಾಗೂ ಎಸ್‌ಐಓ ನೇತೃತ್ವದಲ್ಲಿ ಉಮರ್ ಖಾಲಿದ್ ಬಂಧನದ 6 ವರ್ಷದ ಹಿನ್ನೆಲೆಯಲ್ಲಿ ಯುಎಪಿಎ ಹಾಗೂ ಎನ್‌ಎಸ್‌ಎ ಕರಾಳ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಈ ಕಾಯ್ದೆಗಳು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಹಾಗು ರಾಷ್ಟ್ರೀಯ ಭದ್ರತೆಗಳ ಹೆಸರಿನಲ್ಲಿ ಅನಿಯಂತ್ರಿತ ಪ್ರಜಾ ಹಕ್ಕುಗಳ ಪೀಡನೆಯ ಕರಾಳ ಕಾನೂನುಗಳಾಗಿ ಪರಿಣಮಿಸಿವೆ. ಪ್ರಜಾ ಹಕ್ಕುಗಳ ರಕ್ಷಣೆ ಹಾಗು ಪ್ರಜಾತಂತ್ರದ ಘನತೆಯ ಉಳಿವಿಗಾಗಿ ಈ ಕಾಯ್ದೆಗಳ ರದ್ಧತಿಗೆ ಧ್ವನಿ ಎತ್ತುವುದು ಅನಿವಾರ್ಯವಾಗಿದೆ ಎಂದರು.
2019ರ ವರೆಗೆ ಯುಎಪಿಎ ಕಾಯ್ದೆಯು ನಿಷೇಧಿತ ಸಂಘಟನೆಗಳ ಮೇಲೆ ಕ್ರಮಕ್ಕೆ ಸೀಮಿತವಾಗಿತ್ತು. 2019ರಲ್ಲಿ ಪ್ರಜೆಗಳ ಮೇಲೆ ವೈಯಕ್ತಿಕವಾಗಿ ಪ್ರಯೋಗಿಸುವುದಕ್ಕೆ ಬಳಕೆ ಆಗುವಂತೆ ತಿದ್ದುಪಡಿ ಮಾಡಿ ಮತ್ತಷ್ಟೂ ವಿಕೃತಗೊಳಿ ಸಲಾಗಿದೆ. 2010-2022ರವರೆಗೆ ಯುಎಪಿಎ ಅಡಿ 12,787 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಶೇ.1ಕ್ಕಿಂತ ಕಡಿಮೆ ಪ್ರಕರಣಗಳು ವಿಚಾರಣೆಗೆ ಬಂದಿವೆ. ಬಾಕಿ ಶೇ.99 ಪ್ರಕರಣಗಳಲ್ಲಿ ಬಂಧಿತರು ವಿಚಾರಣೆ ಇಲ್ಲದೇ ಜಾಮೀನು ಇಲ್ಲದೆ, ಖಾಲಿ ಆರೋಪದ ಆಧಾರದಲ್ಲಿ ವರ್ಷಾಂತರ ಸೆರೆಯಲ್ಲಿದ್ದಾರೆ ಎಂದು ಅವರು ತಿಳಿಸಿದರು.
ಯುಎಪಿಎ ಕಾಯ್ದೆಗೆ ಗುರಿಯಾಗಿರುವವರಲ್ಲಿ ಬಹುಪಾಲು ಅಲ್ಪ ಸಂಖ್ಯಾತರು, ಅದಿವಾಸಿ ಹಾಗೂ ದಲಿತರು ಆಗಿದ್ದಾರೆ. 2017-2022ರ ನಡುವಿನ 5 ವರ್ಷಗಳಲ್ಲಿ 3000ಕ್ಕಿಂತ ಹೆಚ್ಚು ಯುಎಪಿಎ ಕಾಯ್ದೆಯಡಿ ಬಂಧನಗಳು ನಡೆದಿವೆ. ಇವುಗಳು ಜಾತಿ ಹಿಂಸೆ, ಕೋಮು ಹಿಂಸೆ ಹಾಗು ಕಾರ್ಮಿಕ ಪ್ರತಿಭಟನೆಗಳಿಗೆ ಸಂಬಂಧಿಸಿದ ಪ್ರಕರಣ ಗಳಾಗಿದ್ದು, ಹಿಂಸೆಗೆ ತುತ್ತಾದ ಸಮುದಾಯ/ವರ್ಗದ ಜನರೇ ಬಂಧನಕ್ಕೆ ಗುರಿ ಯಾಗಿದ್ದಾರೆ ಎಂಬುದೇ ಈ ಕಾಯ್ದೆಯ ಕರಾಳತೆಯಾಗಿದೆ ಎಂದು ಅವರು ಟೀಕಿಸಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಅಮಾಯಕರನ್ನು ದೇಶದ್ರೋಹದಡಿ ಪ್ರಕರಣ ದಾಖಲಿಸಿ ಬಂಧಿಸುವ ಕೇಂದ್ರ ಬಿಜೆಪಿ ಸರಕಾರ, ಹಲವಾರು ಸರಕಾರಿ ಸಂಘಸಂಸ್ಥೆ ಗಳನ್ನು ಅದಾನಿ ಅಂಬಾನಿಯವರಿಗೆ ಮಾರಾಟ ಮಾಡಿರುವುದು ದೇಶದ್ರೋಹ ಅಲ್ಲವೇ? ಸುಳ್ಳು ಪ್ರಕರಣದಲ್ಲಿಯೂ ಬಂಧಿತರಾಗಿ ರುವವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸುತ್ತಿದ್ದು, ಇದೀಗ ನಮಗೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯೂ ಸಂಶಯ ಮೂಡುವಂತಾಗಿದೆ ಎಂದು ದೂರಿದರು.
ಧರಣಿಯಲ್ಲಿ ದಸಂಸ ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಶಿವಾನಂದ ಮೂಡಬೆಟ್ಟು, ಸುಂದರಿ ಪುತ್ತೂರು, ಸಾಲಿಡ್ಯಾರಿಟಿ ಯೂಥ್ ಮೂವ್ಮೆಂಟ್‌ನ ಜಿಲ್ಲಾಧ್ಯಕ್ಷ ಅಫ್ವಾನ್, ನಿಹಾಲ್, ಹಂಝ, ಭಾರತೀಯ ಕ್ರೈಸ್ತ ಒಕ್ಕೂಟದ ಪ್ರಶಾಂತ್ ಜತ್ತನ್ನ, ಅಲ್ಪಸಂಖ್ಯಾತರ ವೇದಿಕೆಯ ಚಾರ್ಲ್ಸ್ ಆ್ಯಂಬ್ಲರ್, ಪ್ರಮುಖರಾದ ಅಝೀಝ್ ಉದ್ಯಾವರ, ಅನ್ವರ್ ಅಲಿ ಕಾಪು, ಇದ್ರೀಸ್ ಹೂಡೆ, ಉದ್ಯಾವರ ನಾಗೇಶ್ ಕುಮಾರ್, ಅಮೃತ್ ಶೆಣೈ, ಹುಮೈರಾ ಕಾರ್ಕಳ ಮೊದಲಾದವರು ಉಪಸ್ಥಿತರಿದ್ದರು.






