ಕಲಾವಿದ ಎಂ.ಟಿ.ಎಸ್. ಕುಲಾಲ್ ನಿಧನ

ಉಡುಪಿ, ಸೆ.15: ತೆಂಕು ತಿಟ್ಟಿನ ಸಮರ್ಥ ಕಲಾವಿದರಲ್ಲೊಬ್ಬರಾದ ಎಂ. ಟಿ.ಎಸ್ ಕುಲಾಲ್ (79) ಮಂಗಳವಾರ ನಿಧನರಾದರು. ಅವರು ಪತ್ನಿ, ಪುತ್ರಿ,ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಸೋದರ ಮಾವ ಬೇತಕುಂಞಿ ಕುಲಾಲರಲ್ಲಿ ಯಕ್ಷಗಾನ ಕಲಿತು ಧರ್ಮಸ್ಥಳ, ಮುಲ್ಕಿ, ಸುರತ್ಕಲ್, ಕುಂಬ್ಳೆ, ಬಪ್ಪನಾಡು, ಕಟೀಲು ಮೇಳಗಳಲ್ಲಿ ಆರು ದಶಕಗಳ ಕಲಾಸೇವೆ ಮಾಡಿದ್ದರು. ಭಾಗವತಿಕೆಯಲ್ಲೂ ಪರಿಣತಿ ಪಡೆದಿದ್ದ ಇವರು ರಾಜವೇಷ, ಪೋಷಕ ವೇಷ, ಸ್ತ್ರೀವೇಷ, ಹಾಸ್ಯ ಹೀಗೆ ಎಲ್ಲಾ ರೀತಿಯ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದರು.
ತಮ್ಮ ಇಳಿ ವಯಸ್ಸಿನಲ್ಲೂ ಮೇಳದ ಪ್ರತಿನಿಧಿಯಾಗಿ ಕಲಾರಂಗಕ್ಕೆ ಬರುತ್ತಿದ್ದರು. ಪ್ರತಿ ವರ್ಷ ಯಕ್ಷನಿಧಿ ಸಮಾವೇಶ ದಲ್ಲಿ ತಪ್ಪದೆ ಭಾಗವಹಿಸುತ್ತಿದ್ದರು. ತಿಂಗಳ ಹಿಂದಷ್ಟೇ ಕಟೀಲು ಮೇಳದ ಅಭಿಮಾನಿಗಳು ಅವರ ಮನೆಗೆ ತೆರಳಿ ಅವರನ್ನು ಗೌರವಿಸಿದ್ದರು. ಸಂಸ್ಥೆ ಅವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಕಳೆದ ವರ್ಷ ಸಂಸ್ಥೆಯ 50,000 ರೂ. ನಿಧಿಯನ್ನೊಳಗೊಂಡ ಸುವರ್ಣ ಪುರಸ್ಕಾರಕ್ಕೆ ಭಾಜನರಾಗಿದ್ದರು.
ಕುಲಾಲರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆರ್ಕಾ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.






