‘ಕಸ್ತೂರಿರಂಗನ್ ವರದಿ ಕೇಂದ್ರ ಸರಕಾರ ಹಿಂದಕ್ಕೆ ಪಡೆಯಲಿ’

ಉಡುಪಿ, ಸೆ.15: ಪಶ್ಚಿಮ ಘಟ್ಟ ಹಾಗೂ ಅದರ ತಪ್ಪಲು ಪ್ರದೇಶಗಳ ನಿವಾಸಿಗಳಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ಜಾರಿ ಅಧಿಸೂಚನೆ ಯನ್ನು ಕೇಂದ್ರ ಸರಕಾರ ತಕ್ಷಣವೇ ಹಿಂದಕ್ಕೆ ಪಡೆಯುವಂತೆ ವರದಿ ಜಾರಿ ಯನ್ನು ವಿರೋಧಿಸುತ್ತಿರುವ ಹೆಬ್ರಿ, ಕಾರ್ಕಳ ಭಾಗದ ಕಾಂಗ್ರೆಸ್ ನಾಯಕರು ಮುನಿಯಾಲು ಉದಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಆಗ್ರಹಿಸಿದರು.
ಉಡುಪಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರ ಏಳನೇ ಬಾರಿಗೆ ಅಧಿ ಸೂಚನೆ ಹೊರಡಿಸಿರುವುದು ಅಲ್ಲಿನ ನಿವಾಸಿಗಳಿಗೆ ಆತಂಕವನ್ನುಂಟು ಮಾಡಿದೆ. ಸೆ. 18ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೆಬ್ರಿ ತಾಲೂಕಿಗೆ ಆಗಮಿಸುವ ಸಂದರ್ಭದಲ್ಲಿ ವರದಿ ಬಾಧಿತ ಪ್ರದೇಶದ ಜನರು ಸಮಸ್ಯೆಯ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ರಾಜ್ಯದ 35 ಗ್ರಾಮಗಳು ಈ ವರದಿಯ ವ್ಯಾಪ್ತಿಯಲ್ಲಿವೆ. ಜನವಿರೋದಿ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರದ ನಡೆಯನ್ನು ಹಿಂಪಡೆಯುವಂತೆ ನಾವು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದೇವೆ ಎಂದರು.
ಈ ಭಾಗದ ಜನರು ನೂರಾರು ವರ್ಷಗಳಿಂದ ಭತ್ತ ತೆಂಗು, ಕಾಳು ಮೆಣಸು, ತರಕಾರಿ, ರಬ್ಬರ್ ಮೊದಲಾದ ಬೆಳೆಗಳನ್ನು ಬೆಳೆಸುತ್ತಾ ಕೃಷಿ ಕಾಯಕದಲ್ಲಿ ತೊಡಗಿದ್ದು ಕೇಂದ್ರ ಸರ್ಕಾರದ ಅಧಿಸೂಚನೆಯಿಂದ ಆತಂಕಿತರಾ ಗಿದ್ದಾರೆ. ಸ್ಥಳೀಯರ ಭೂಹಕ್ಕಿಗೆ ಧಕ್ಕೆ ಬರಬಾರದು, ಜನರು ನಿರಾತಂಕವಾಗಿ ಜೀವನ ಮಾಡುವಂತಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಸ್ಥಳೀಯರ ಅಹವಾಲುಗಳನ್ನು ಕೇಳದೆ, ಗ್ರಾಮ ಸಭೆಗಳನ್ನು ನಡೆಸದೆ ಕೇವಲ ವೈಮಾನಿಕ ಸಮೀಕ್ಷೆಯನ್ನು ನಡೆಸಿ ಎಸಿ ರೂಮಿನಲ್ಲಿ ಕುಳಿತು ಪಶ್ಚಿಮ ಘಟ್ಟ ರಕ್ಷಣೆ ಮಾಡುತ್ತೇವೆ ಎಂದು ವರದಿ ಕೇಳುವುದು ತೀವ್ರ ಖಂಡನೀಯ ಎಂದರು.
ಕಳೆದ ಮೂರು ದಶಕಗಳಿಂದ ಕರಾವಳಿಯಲ್ಲಿ ಬಿಜೆಪಿ ಸತತವಾಗಿ ಚುನಾವಣೆಗಳನ್ನು ಗೆಲ್ಲುತ್ತಾ ಬಂದರೂ ಈ ಭಾಗದ ಜನರಿಗೆ ಬಿಜೆಪಿಯ ಕೊಡುಗೆ ಶೂನ್ಯ. ತುಳುನಾಡಿನ ಜನ ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡಿದರು, ಆದಕ್ಕೆ ಪ್ರತಿಯಾಗಿ ಬಿಜೆಪಿ ತುಳುನಾಡಿನ ಜನರಿಗೆ ಯಾವ ಕೊಡುಗೆಯನ್ನು ನೀಡದೆ ಮೋಸ ಮಾಡಿದೆ, ಕೇವಲ ಧರ್ಮ ಧರ್ಮಗಳ ನಡುವೆ ಹೊಡೆದಾಡುವ ಗಲಭೆಗಳನ್ನು ಸೃಷ್ಟಿಸಿ ಜಿಲ್ಲೆಯ ಶಾಂತಿ ಸೌಹಾರ್ದತೆಯನ್ನು ಹಾಳುಗೆಡವಿದ್ದೇ ಬಿಜೆಪಿ ಈ ಜಿಲ್ಲೆಗೆ ನೀಡಿದ ಕೊಡುಗೆಯಾಗಿದೆ ಎಂದು ಆರೋಪಿಸಿದರು.
ಕರಾವಳಿ ಜಿಲ್ಲೆಗಳು ರಾಜ್ಯದ ಸೇವಾ ವಲಯದಲ್ಲಿ ಪ್ರಥಮ ಸ್ಥಾನಿಯಾಗಿ ಗುರುತಿಸಿಕೊಂಡಿವೆ. ಸೇವಾವಲಯ ಗಳಾದ ಹೋಟೆಲ್ ಉದ್ಯಮ, ಬ್ಯಾಂಕಿಂಗ್ ಸೇವೆ, ಶಿಕ್ಷಣ ಕ್ರೇತ್ರ, ಕೈಗಾರಿಕೆಗಳಲ್ಲಿ ರಾಜ್ಯಕ್ಕೆ ಕರಾವಳಿಯ ಕೊಡುಗೆ ಅಪಾರವಾಗಿದೆ. ರಾಜ್ಯದ ತಲಾದಾಯದಲ್ಲಿಯೂ ಕರಾವಳಿ ಜಿಲ್ಲೆಯ ಸಾಮರ್ಥ್ಯ ಬೆಂಗಳೂರಿನ ನಂತರದ ಸ್ಥಾನ ದಲ್ಲಿದೆ. ಕರಾವಳಿ ರಾಜ್ಯದ ವಾಣಿಜ್ಯ ನಗರಿಯಾಗಿ ಬೆಳೆಯುವ ಎಲ್ಲಾ ಶಕ್ತಿ ಸಾಮರ್ಥ್ಯವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ವಿಶೇಷ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕರಾವಳಿಯ ಲಕ್ಷಾಂತರ ಜನರ ಮಾತೃಭಾಷೆಯಾಗಿರುವ ತುಳುವನ್ನು ಅಧಿಕೃತ ಬಾಷೆಯಾಗಿ ಘೋಷಿಸುವುದು ಮತು 8ನೇ ಪರಿಚ್ಛೇಧಕ್ಕೆ ಸೇರಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲು ರಾಜ್ಯ ಸರಕಾರ ಮುಂದಾಗ ಬೇಕು. ತುಳುವರಿಗಾಗಿ ತುಳು ಅಭಿವೃದ್ಧಿ ನಿಗಮ ಘೋಷಿಸ ಬೇಕು ಎಂದೂ ಅವರು ಸರಕಾರವನ್ನು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಗೋಪಿನಾಥ್ ಭಟ್, ಯೋಗೀಶ್ ಆಚಾರ್ಯ, ಪ್ರದೀಪ್ ಬೇಲಾಡಿ, ಅಜಿತ್ ಹೆಗ್ಡೆ, ಅನಿಲ್ ಪೂಜಾರಿ ಮಾಳ, ಭಾನುಭಾಸ್ಕರ್ ಪೂಜಾರಿ ಉಪಸ್ಥಿತರಿದ್ದರು.






