ಕರಾವಳಿಯಲ್ಲಿ ಕಾಂಗ್ರೆಸ್ ಮೀನುಗಾರರ ಸಮಾವೇಶ: ಬಸವಂತಪ್ಪ

ಉಡುಪಿ, ಸೆ.17: ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಕರಾವಳಿಯಲ್ಲಿ ಮತ್ತೊಮ್ಮೆ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಕರಾವಳಿಯಲ್ಲಿ ಕಾಂಗ್ರೆಸ್ ಮೀನುಗಾರರ ಸಮಾವೇಶ ವನ್ನು ಆಯೋಜಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಹೇಳಿದ್ದಾರೆ.
ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಬುಧವಾರ ಭೇಟಿ ನೀಡಿ ಜಿಲ್ಲಾ ಕಾಂಗ್ರೆಸ್‌ನಿಂದ ಸನ್ಮಾನ ಸ್ವೀಕರಿಸಿ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆ, ತಾಲೂಕು, ಗ್ರಾಪಂ ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಕ್ರಮ ವಹಿಸಲಾಗುವುದು. ಪಕ್ಷ ಸಂಘಟನೆ ಯಲ್ಲಿ ರಾಜ್ಯದಲ್ಲೇ ನಾವು ಮೊದಲ ಸ್ಥಾನದಲ್ಲಿ ನಿಲ್ಲಬೇಕು. ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಜತೆಗೆ ಸಂಘಟಿಸಬೇಕು. ಭಾರತ್ ಜೋಡೋ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸರಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಬೇಕು ಎಂದರು.
ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮೀನುಗಾರರಿಗೆ ನೀಡುವ ಡೀಸೆಲ್ ಸಬ್ಸಿಡಿಯ ಬಗ್ಗೆ ಸಾಕಷ್ಟು ಅಪಾದನೆಗಳಿದ್ದು, ಈ ಬಗ್ಗೆ ಇಲಾಖೆ ನಿಗಾ ವಹಿಸಿ ಮೀನುಗಾರರಿಗೆ ಅನ್ಯಾಯವಾಗದಂತೆ ನೋಡಬೇಕು. ಹೆಜಮಾಡಿ-ಕೋಡಿ ಬಂದರು ಕಾಮಗಾರಿಯನ್ನು ಅತ್ಯಂತ ತ್ವರಿತವಾಗಿ ಮುಗಿಸಬೇಕು. ಮೀನುಗಾರರಿಗೆ ಸರಕಾರದಿಂದ ಮನೆ, ನಾಡದೋಣಿಗಳಿಗೆ ಸಬ್ಸಿಡಿಯಲ್ಲಿ ಸೀಮೆ ಎಣ್ಣೆ ಕೊಟ್ಟರೆ ಮೀನುಗಾರರಿಗೆ ಅನುಕೂಲ ವಾಗುತ್ತದೆ. ಈ ಬಗ್ಗೆ ಗಮನ ಹರಿಸಿ ಆದ್ಯತೆಯಲ್ಲಿ ಪರಿಹಾರ ನೀಡಬೇಕು ಎಂದು ತಿಳಿಸಿದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುಖಂಡರಾದ ರಾಜು ಪೂಜಾರಿ, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ಹರಿಪ್ರಸಾದ್ ರೈ, ವಿಶ್ವಾಸ್ ಅಮೀನ್, ದಿನೇಶ್ ಪುತ್ರನ್, ಮಹಾಬಲ ಕುಂದರ್, ಕೃಷ್ಣಮೂರ್ತಿ ಕಾರ್ಕಳ, ಬಿ.ನರಸಿಂಹ ಮೂರ್ತಿ, ಪ್ರಖ್ಯಾತ ಶೆಟ್ಟಿ, ವಾಸುದೇವ ಯಡಿಯಾಳ, ಹಬೀಬ್ ಅಲಿ, ದಿನಕರ ಹೇರೂರು, ಮೀನಾಕ್ಷಿ ಮಾಧವ ಬನ್ನಂಜೆ, ನಿರೀಕ್ಷಾ ಮೆಂಡನ್, ಜಯ ಕುಮಾರ್, ಮನೋಜ್ ಕರ್ಕೆರ, ಲಕ್ಷ್ಮಣ್ ಶೆಟ್ಟಿ, ಕಿಶೋರ್ ಕುಮಾರ್ ಎರ್ಮಾಳ್, ಉದ್ಯಾವರ ನಾಗೇಶ್ ಕುಮಾರ್, ಸಂಧ್ಯಾ ತಿಲಕ್, ಗಣೇಶ್ ನೆರ್ಗಿ ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ವಂದಿಸಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.






