ಮಲ್ಪೆ: ಮಲ್ಪೆ ಮೀನುಗಾರಿಕಾ ಬಂದರಿಗೆ ಸಚಿವ ಬಸವಂತಪ್ಪ ಭೇಟಿ

ಉಡುಪಿ, ಸೆ.16: ರಾಜ್ಯದ ನೂತನ ಮೀನುಗಾರಿಕೆ ಹಾಗೂ ಬಂದರು ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕರಾವಳಿ ಭಾಗಕ್ಕೆ ಭೇಟಿ ನೀಡಿದ ಇಲಾಖಾ ಸಚಿವ ದಾವಣಗೆರೆಯ ಮಾಯಕೊಂಡ ಶಾಸಕ ಕೆ.ಎಸ್ ಬಸವಂತಪ್ಪ ಇಂದು ಮಲ್ಪೆ ಬಂದರಿಗೆ ಭೇಟಿ ನೀಡಿ ವಿವಿಧ ಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಆಳಸಮುದ್ರದಲ್ಲಿ ಹಿಡಿದು ಬೋಟಿನಲ್ಲಿ ತಂದು ಬಂದರಿನ ಧಕ್ಕೆಯಲ್ಲಿ ಇರಿಸಿದ್ದ ವೈವಿಧ್ಯಮಯ ಮೀನುಗಳನ್ನು ನೋಡಿ ಖುಷಿ ಪಟ್ಟ ಸಚಿವರು, ಅವುಗಳನ್ನು ಕೈಯಲ್ಲಿ ಹಿಡಿದು, ಮುಟ್ಟಿ ನೋಡಿದರು. ಕಾಂಗ್ರೆಸ್ ನಾಯಕರಿಂದ ಕರಾವಳಿಯ ಮೀನುಗಾರಿಕೆ ಕುರಿತಂತೆ ಮಾಹಿತಿಗಳನ್ನು ಪಡೆದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ ಗಫೂರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡ ಪ್ರಸಾದ್ ರಾಜ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.
Next Story






