ಹೆಬ್ರಿಗೆ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ಭೇಟಿ; ಸಭೆಗೆ ಸಿದ್ಧತೆಗಳ ಪರಿಶೀಲನೆ

ಹೆಬ್ರಿ, ಸೆ.17: ರಾಜ್ಯದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಶುಕ್ರವಾರ ಅಪರಾಹ್ನ 3 ಗಂಟೆಗೆ ಹೆಬ್ರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಸಂತ್ರಸ್ಥ ಗ್ರಾಮಗಳ ಜನರೊಂದಿಗೆ ನಡೆಸುವ ಸಭೆಗೆ ಸಂಬಂಧಿಸಿದಂತೆ ಪೂರ್ವಸಿದ್ಧತೆಗಳನ್ನು ಪರಿಶೀಲಿಸಲು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಿಝ್ವಾನ್ ಅರ್ಷದ್ ಇಂದು ಭೇಟಿ ನೀಡಿ ಪರಿಶೀಲಿಸಿದರು.
ಈ ಸಭೆಯಲ್ಲಿ ಕಸ್ತೂರಿರಂಗನ್ ವರದಿಯ ಸಾಧಕ-ಬಾಧಕಗಳ ಕುರಿತು ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ 35 ಗ್ರಾಮಗಳ ಗ್ರಾಮಸ್ಥರೊಂದಿಗೆ ಅವರು ಚರ್ಚೆ ನಡೆಸಿ ಅಭಿಪ್ರಾಯ ಪಡೆಯಲಿದ್ದಾರೆ. ಕಸ್ತೂರಿರಂಗನ್ ವರದಿಗೆ ಒಳಪಡುವ ಕುಂದಾಪುರ, ಕಾರ್ಕಳ, ಹೆಬ್ರಿ ಹಾಗೂ ಬೈಂದೂರು ತಾಲೂಕುಗಳ ವ್ಯಾಪ್ತಿಯ 35 ಗ್ರಾಮಗಳ ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಸೇರಿದಂತೆ ಹಿರಿಯ ಅಧಿಕಾರಿ ಗಳೊಂದಿಗೆ ಸಭೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರೂ ಆಗಿರುವ ರಿಝ್ವಾನ್ ಅರ್ಷದ್ ಸಭೆಯನ್ನು ಸುವ್ಯವಸ್ಥಿತವಾಗಿ ನಡೆಸಲು ನಡೆದಿರುವ ಪೂರ್ವ ಸಿದ್ಧತೆಗಳ ಪರಿಶೀಲನೆ ನಡೆಸಿ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜನಾಥ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮುಖಂಡ ರಾದ ಉದಯ್‌ಕುಮಾರ್ ಶೆಟ್ಟಿ ಮುನಿಯಾಲು, ಕಿಶನ್ ಹೆಗ್ಡೆ ಕೊಳ್ಕೆಬೈಲು, ಜಿಲ್ಲಾಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಸಹಾಯಕ ಕಮಿಷನರ್ ರಶ್ಮಿ ಮುಂತಾದವರು ಉಪಸ್ಥಿತರಿದ್ದರು.






