ಕೋಟದಿಂದ ಕೋಡಿಯವರೆಗೆ ಬೀಚ್ ಕ್ಲಿನಿಂಗ್ ಅಭಿಯಾನ

ಕೋಟ, ಸೆ.20: ಉಡುಪಿ ಜಿಲ್ಲಾಡಳಿತ ನಿರ್ದೇಶನದ ಮೇರೆಗೆ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ರೋಟರಿ ಸಮುದಾಯದಳ ಮೂಡುಗಿಳಿಯಾರು, ಗೀತಾನಂದ ಫೌಂಡೇಶನ್ ಮಣೂರು ಸೇರಿದಂತೆ ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಕೋಟತಟ್ಟು, ಕೋಡಿ ಗ್ರಾಪಂ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಂಯೋಜನೆಯೊಂದಿಗೆ ಅಂತಾರಾಷ್ಟ್ರೀಯ ಬೀಚ್ ಕ್ಲಿನಿಂಗ್ ಅಭಿಯಾನವನ್ನು ರವಿವಾರ ಕೋಟದಿಂದ ಕೋಡಿಯವರೆಗೆ ವಿವಿಧ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಜೇಂದ್ರ ಸುವರ್ಣ ಮಾತನಾಡಿ, ಸ್ವಚ್ಛತೆಯ ಬಗ್ಗೆ ಜಿಲ್ಲಾಡಳಿತವೇ ಕಠಿಣ ಕ್ರಮಗಳನ್ನು ಕೈಗೊಂಡರೆ ಎಸೆಯುವ ಹಾಗೂ ಮಲಿನಗೊಳಿಸುವ ಕೈಗೆ ಮುಕ್ತಿಗಾಣಿಸ ಬಹುದು. ಪರಿಸರಕ್ಕೆ ಹಾನಿಕರ ಆಗುವ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ, ಸ್ಥಳೀಯ ಮನೆಗಳ ಹಾಗೂ ಅಲ್ಲಿನ ಮಕ್ಕಳಿಗೆ ಕಸ ಎಸೆಯದಂತೆ ಗ್ರಾಮ ಆಡಳಿತ ಖಡಕ್ ಸೂಚನೆ ನೀಡಬೇಕು. ಪರಿಸರ ಮಲಿನಗೊಂಡರೆ ಮನುಕುಲಕ್ಕೆ ಸಂಕಷ್ಟ ತಪ್ಪಿದಲ್ಲ ಎಂದು ಹೇಳಿದರು.
ಅಭಿಯಾನಕ್ಕೆ ಬ್ರಹ್ಮಾವರ ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜಿ.ರಾಮದಾಸ್ ಚಾಲನೆ ನೀಡಿದರು. ತಾಪಂ ಸಹಾಯಕ ಕಾರ್ಯ ನಿರ್ವಾಣಾಕಾರಿ ಮಹೇಶ್ ಅಭಿಯಾನದ ಪ್ರತಿಜ್ಞಾವಿಧಿ ಭೋದಿಸಿದರು. ಕೋಟತಟ್ಟು, ಕೋಡಿ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಮಾತನಾಡಿದರು.
ಬೋಟ್ ಅವಶೇಷ ಸಂಗ್ರಹ: ಕೋಟತಟ್ಟು ಪಡುಕರೆಯಲ್ಲಿ ಇತ್ತೀಚಿಗೆ ದಡಕ್ಕೆ ಸೇರಿದ ಮೀನುಗಾರಿಕಾ ಬೋಟ್ ಅವಶೇಷದ ವಸ್ತುಗಳು ಸುಮಾರು ಒಂದು ಕೀ.ಮೀ ವ್ಯಾಪ್ತಿಯಲ್ಲಿ ಮಲಿನಗೊಂಡ ಆವರಿಸಿಕೊಂಡಿದ್ದು ಅದನ್ನು ಪೂರ್ಣ ಪ್ರಮಾಣದಲ್ಲಿ ಸ್ವಚ್ಛಗೊಳಿಸಿದ ಸ್ವಯಂಸೇವಕರು ಸುಮಾರು 100ಕ್ಕೂ ಅಧಿಕ ಚೀಲ ಬೋಟ್ ಅವಶೇಷದ ತ್ಯಾಜ್ಯಗಳನ್ನು ಸ್ಥಳಾಂತರಿಸಿದರು.
ಅಭಿಯಾನದಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ರೋಟರಿ ಸಮುದಾಯದ ದಳದ ಗೋಪಾಲ್ ಗಿಳಿಯಾರು,ದಯಾನಂದ ಪೂಜಾರಿ, ಕೋಟತಟ್ಟು ಎಸ್‌ಎಲ್‌ಆರ್‌ಎಂ ಘಟಕದ ರಂಜಿನಿ ಮೊದಲಾದವರು ಉಪಸ್ಥಿತರಿದ್ದರು. ಮಹಿಳಾ ಮಂಡಲದ ಸುಜಾತ ಬಾಯರಿ ನಿರೂಪಿಸಿ ವಂದಿಸಿದರು. ರವೀಂದ್ರ ಕೋಟ ಅಭಿಯಾನವನ್ನು ಸಂಯೋಜಿಸಿದರು.






