ನೀಲಿ ಶಾಲಿನ ಬಗ್ಗೆ ಹಗುರವಾಗಿ ಮಾತನಾಡಿದರೆ ತಕ್ಕ ಉತ್ತರ: ಪ್ರತಾಪ್ ಸಿಂಹಗೆ ದಸಂಸ ಮುಖಂಡ ಸುಂದರ್ ಮಾಸ್ತರ್ ಎಚ್ಚರಿಕೆ

ಉಡುಪಿ, ಸೆ.20: ಮಾಜಿ ಸಂಸದ ಪ್ರತಾಪ್ ಸಿಂಹಗೆ ನೀಲಿ ಶಾಲು ಕಂಡರೆ ಭಯ ಆರಂಭವಾಗಿದೆ. ನೀಲಿ ಶಾಲಿನ ಬಗ್ಗೆ ಮಾತನಾಡುವಾಗ ನಾಲಿಗೆಗೆ ಎಚ್ಚರ ಇರಬೇಕು. ಇದು ಈ ದೇಶದ ಮೂಲನಿವಾಸಿಗಳ ಹೆಗ್ಗುರುತು. ನಮ್ಮ ಸಂಕೇತ. ಇದೇ ರೀತಿ ನೀಲಿ ಶಾಲಿನ ಬಗ್ಗೆ ನಾಲಿಗೆ ಹರಿಬಿಟ್ಟರೇ ಅದರ ಸಾಮರ್ಥ ಏನು ಎಂಬುದನ್ನು ತೋರಿಸ ಬೇಕಾಗುತ್ತದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಎಚ್ಚರಿಕೆ ನೀಡಿದ್ದಾರೆ.
ನೀನು ಮೊದಲು ಅಂಬೇಡ್ಕರ್ ಬಗ್ಗೆ ಓದಿಕೊಳ್ಳು. ಹಿಂದೂ ಧರ್ಮದ ಬಗ್ಗೆ ಏನು ಬರೆದಿದ್ದಾರೆ ? ಜಾತಿ ವ್ಯವಸ್ಥೆ ಬಗ್ಗೆ ಏನು ಹೇಳಿದ್ದಾರೆ? ಶತಶತಮಾನಗಳಿಂದ ಅಕ್ಷರಾಭ್ಯಾಸದಿಂದ ದಲಿತ ಸಮೂದಾಯ ವಂಚಿತ ರಾಗಲು ಕಾರಣ ಏನು? ಅಸಮಾನತೆಯ ತಳಹದಿ ಎಲ್ಲಿದೆ? ಒಂದು ಮಗು ಹುಟ್ಟಿದ ತಕ್ಷಣ ಅದು ಅಸ್ಪೃಶ್ಯತೆಗೆ ಗುರಿಯಾಗಲು ಮಾನದಂಡ ಯಾವುದು? ಇವೆಲ್ಲದರ ಬಗ್ಗೆ ಅಂಬೇಡ್ಕರ್ ಸವಿವರವಾಗಿ ಏನು ಬರೆದಿದ್ದಾರೆ ಎಂದು ತಿಳಿದು ಮಾತನಾಡು ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಪ್ರತಾಪ ಸಿಂಹ ಲೋಕಸಭಾ ಸದಸ್ಯನಾಗಿ ಆಯ್ಕೆ ಆಗಿರುವುದು ಅಂಬೇಡ್ಕರ್ ಬರೆದ ಸಂವಿಧಾನದ ಆಶಯದಿಂದ. ಅದನ್ನು ಮರೆಯ ಬಾರದು. ಅಧಿಕಾರದ ಹಪಹಪಿಯಿಂದ ಯಾರನ್ನೋ ಓಲೈಸುವ ಭರದಲ್ಲಿ, ದಲಿತರ ಆರಾಧ್ಯ ತಂದೆ ಸಮಾನರಾದ ಅಂಬೇಡ್ಕರ್ ಅವರನ್ನು ಅವಮಾನಿಸಿದರೆ ಹಾಗೆಯೇ ದಲಿತರ ಅಸ್ಮಿತೆಯಾದ ನೀಲಿ ಶಾಲಿನ ಬಗ್ಗೆ ಹಗುರವಾಗಿ ಮಾತನಾಡಿದರೆ ದಲಿತ ಸಂಘರ್ಷ ಸಮಿತಿ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




