ಬಿಜೂರು ನಿಲ್ದಾಣದಲ್ಲಿ ಪ್ರಮುಖ ರೈಲುಗಳ ನಿಲುಗಡೆಗೆ ಆಗ್ರಹಿಸಿ ಧರಣಿ

ಬೈಂದೂರು, ಸೆ.20: ಬಿಜೂರು ರೈಲು ನಿಲ್ದಾಣದಲ್ಲಿ ಮುಂಬೈ ಹಾಗೂ ಬೆಂಗಳೂರಿಗೆ ತೆರಳುವ ರೈಲುಗಳಿಗೆ ನಿಲುಗಡೆ ನೀಡುವಂತೆ ಆಗ್ರಹಿಸಿ ಬಿಜೂರು ರೈಲು ಯಾತ್ರಿಕರ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಜನಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಉಪ್ಪುಂದ, ಕೆರ್ಗಾಲು, ನಂದನವನ, ಕಂಚಿಕಾನು, ಕಂಬದಕೋಣೆ, ಹೇರಂಜಾಲು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ರವಿವಾರ ಬಿಜೂರು ರೈಲ್ವೇ ನಿಲ್ದಾಣದಲ್ಲಿ ಧರಣಿ ನಸಿದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಬಿಜೂರು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಸುನಿಲ್ ಪೂಜಾರಿ, ಬಿಜೂರು ನಿಲ್ದಾಣದಲ್ಲಿ ರೈಲುಗಳನ್ನು ನಿಲ್ಲಿಸಬೇಕಾದರೆ ಹೆಚ್ಚುವರಿ ಸಮಯ ನೀಡಬೇಕಾಗಿಲ್ಲ. ಈಗಾಗಲೇ ಪ್ರತಿದಿನ 20-12 ಪ್ಯಾಸೆಂಜರ್ ರೈಲುಗಳು ಬಿಜೂರು ನಿಲ್ದಾಣದಲ್ಲಿ ಕ್ರಾಸಿಂಗ್‌ಗಾಗಿ ನಿಲ್ಲುತ್ತವೆ. ಆ ರೈಲುಗಳನ್ನು ಹತ್ತಲು ಇಳಿಯಲು ಪ್ರಯಾಣಿಕರಿಗೆ ಅವಕಾಶ ನೀಡಿದರೆ ಬಿಜೂರು ನಿಲ್ದಾಣ ಸದುಪಯೋಗವಾಗುತ್ತದೆ. ಸಂಬಂಧ ಪಟ್ಟವರು ಈ ಬಗ್ಗೆ ಗಮನ ಹರಿಸಿ ಬಿಜೂರು ನಿಲ್ದಾಣ ಸದುಪಯೋಗ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಡಾ.ಸುಬ್ರಹ್ಮಣ್ಯ ಭಟ್ ಮಾತನಾಡಿ, ಐದು ನಿಮಿಷ ಕೂಡ ಅಮೂಲ್ಯ ಎಂಬ ರೈಲ್ವೆ ಮಂಡಳಿ ಲೂಪ್ಲೈನ್ ಇಲ್ಲದ ಹಾಲ್ಟ್ ನಿಲ್ದಾಣ ಬೈಂದೂರಿನಲ್ಲಿ ನಿಂತರೆ ಶಿರೂರಿನಿಂದ ಬಿಜೂರಿನವರೆಗೂ ಗೇಟ್ ಹಾಕ ಬೇಕಾಗುತ್ತದೆ. ಅದೇ ಬಿಜೂರಿನಲ್ಲಿ ನಿಂತರೆ ಇಲ್ಲಿ ಕ್ರಾಸಿಂಗ್ ಮಾಡಬಹುದು. ಇಷ್ಟು ದೊಡ್ಡ ತಾಂತ್ರಿಕ ದೋಷ ವಿದ್ದರೂ ಕೊಂಕಣ ರೈಲ್ವೆ ನಿಗಮ ಬೈಂದೂರು ನಿಲುಗಡೆಗೆ ಶಿಪಾರಸ್ಸು ಮಾಡುತ್ತಿದೆ. ಬೈಂದೂರು ನಿಲುಗಡೆಗೆ ಪ್ರಯಾಣಿಕರ ಸುರಕ್ಷತೆ ಜೀವನದ ಸುರಕ್ಷತೆ ಬಗ್ಗೆ ಇಲಾಖೆ ಗಮನ ನೀಡಿಲ್ಲ. ಈ ಬಗ್ಗೆ ದೆಹಲಿ ಸಚಿವಾಲಯದಿಂದ ಎರಡೂ ನಿಲ್ದಾಣಗಳ ಮೌಲ್ಯಮಾಪನ ಮಾಡಿಸಬೇಕು ಎಂದರು.
ಶಾಸಕ ಗುರುರಾಜ ಗಂಟಿಹೊಳೆ ಪ್ರತಿಭಟನಾಕಾರರ ಬೇಡಿಕೆಗಳ ಬಗ್ಗೆ ವಿಶೇಷ ಮುತುವರ್ಜಿ ವಹಿಸುವುದಾಗಿ ತಿಳಿಸಿದರು. ರೈಲ್ವೆ ಹಿರಿಯ ಟ್ರಾಫಿಕ್ ನಿರೀಕ್ಷಕ ರಾಜೇಶ ಶೆಟ್ಟಿ ಅವರಿಗೆ ಮನವಿ ನೀಡಲಾಯಿತು. ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ನೇತೃತ್ವದಲ್ಲಿ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಸ್ಟೇಷನ್ ಮಾಸ್ತರ್ ಸಂತೋಷ್, ರೈಲ್ವೆ ಹೋರಾಟ ಸಮಿತಿಯ ಮುಖಂಡರಾದ ಪುಂಡಲೀಕ ಕಿಣಿ ಕಂಚಿಕಾನ್, ಡಾ.ಸುಬ್ರಹ್ಮಣ್ಯ ಭಟ್, ಶ್ರೀಶ ಭಟ್, ಹೊಸ್ಕೋಟೆ ವೆಂಕಟೇಶ ರಾವ್ ಮೊದಲಾದವರು ಉಪಸ್ಥಿತರಿದ್ದರು. ಮಂಜುನಾಥ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.
ದೇಶದ ಎಲ್ಲಾ ಕಡೆಗಳಲ್ಲಿ ಹೊಸ ಹೊಸ ವಿನ್ಯಾಸದ ಹಾಗೂ ಆಧುನಿಕತೆಯ ರೈಲುಗಳ ಸೇವೆಯ ಮೂಲಕ ರೈಲ್ವೆ ಇಲಾಖೆ ದೇಶದ ಪ್ರತಿಷ್ಠೆ ಹಾಗೂ ಅಭಿವೃದ್ಧಿಯ ಕನಸನ್ನು ನನಸಾಗಿಸಿದೆ. ಆದರೆ ಬಿಜೂರು ರೈಲ್ವೆ ನಿಲ್ದಾಣವು ಲೂಪ್ಲೈನ್ ಸೇರಿದಂತೆ ರೀತಿಯಲ್ಲೂ ಸುಸಜ್ಜಿತವಾದ ನಿಲ್ದಾಣವಾಗಿದ್ದರೂ ಕೂಡ 1996ರಿಂದ ಈ ಭಾಗಕ್ಕೆ ಅನುಕೂಲವಾಗಿಲ್ಲ. ಬಿಜೂರು ಭಾಗದ ರೈತರ ಸುಮಾರು 48 ಏಕ್ರೆ ಫಲವತ್ತಾದ ಕೃಷಿ ಭೂಮಿಯನ್ನು ಅತ್ಯಂತ ಕಡೆಮೆ ಹಣದಲ್ಲಿ ಇಲಾಖೆ ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ಈಗ ಅದು ಪ್ರಯೋನವಿಲ್ಲದಾಗಿದೆ. ಒಂದೇ ಈ ನಿಲ್ದಾಣ ಅಭಿವೃದ್ಧಿಪಡಿಸಿ, ಮೇಲ್ದರ್ಜೆಗೇರಿಸಿ ಇಲ್ಲದಿದ್ದರೇ ಈ ನಿಲ್ದಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಫಲವತ್ತಾದ ಕೃಷಿಭೂಮಿ ರೈತರಿಗೆ ಹಿಂತಿರುಗಿಸಬೇಕು’
- ಸುನಿಲ್ ಪೂಜಾರಿ, ಅಧ್ಯಕ್ಷರು, ಬಿಜೂರು ರೈಲ್ವೆ ಹೋರಾಟ ಸಮಿತಿ






