ಕುಂದಾಪುರ: ರಿಕ್ಷಾ ಚಾಲಕರಿಗೆ ಆರೋಗ್ಯ ತಪಾಸಣಾ ಶಿಬಿರ

ಕುಂದಾಪುರ, ಸೆ.20: ರಿಕ್ಷಾ ಚಾಲಕರು ಅನಾಹುತ, ಅಪಘಾತ ಸಂಭವಿಸಿ ದಾಗ ತುರ್ತಾಗಿ ಸ್ಪಂದಿಸುತ್ತಾರೆ. ಎಲ್ಲರ ಆರೋಗ್ಯದ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆಯೂ ನಿಮಗೆ ಕಾಳಜಿ ಅಗತ್ಯ. ಕಾಲ-ಕಾಲಕ್ಕೆ ತಕ್ಕಂತೆ ಕಣ್ಣಿನ ತಪಾಸಣೆ ಸಹಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಸರಕಾರದಿಂದಲೂ ನಿಮಗೆ ಹಲವು ಸೌಲಭ್ಯಗಳು ಲಭ್ಯವಿದೆ ಎಂದು ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ್ ಹೇಳಿದ್ದಾರೆ.
ರವಿವಾರ ಇಲ್ಲಿನ ಬೋರ್ಡ್ ಹೈಸ್ಕೂಲಿನ ಶ್ರೀಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಭಾರತೀಯ ಆಟೋರಿಕ್ಷಾ ಮಜ್ದೂರ್ ಸಂಘ (ಬಿಎಂಎಸ್) ಕುಂದಾಪುರ ತಾಲೂಕು ಸಂಘದ 20ನೇ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ, ಕುಂದಾಪುರ ತಾಲೂಕು ಆರೋಗ್ಯ ಇಲಾಖೆ, ಶ್ರೀ ಅನ್ನಪೂರ್ಣೇಶ್ವರಿ ಸೇವಾ ಬಂಧು ಟ್ರಸ್ಟ್ ಆಶ್ರಯದಲ್ಲಿ ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರಿಗಾಗಿ ನಡೆದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಆಟೋರಿಕ್ಷಾ ಮಜ್ದೂರ್ ಸಂಘ ಕುಂದಾಪುರದ ಅಧ್ಯಕ್ಷ ಸುರೇಶ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಅನ್ನಪೂರ್ಣೇಶ್ವರಿ ಸೇವಾ ಬಂಧು ಟ್ರಸ್ಟ್‌ನ ಕೆ.ಆರ್.ನಾಯ್ಕ್, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದುಮನೆಯ ಶಂಕರ ಶೆಟ್ಟಿ, ಸರಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕ ರಾಜೇಶ್ ಹೆಬ್ಬಾರ್, ನೇತ್ರತಜ್ಞ ಡಾ. ರಕ್ಷಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಬಿಎಂಎಸ್ ಗೌರವಾಧ್ಯಕ್ಷ ಅಶೋಕ್ ಕೆರೆಕಟ್ಟೆ ಸ್ವಾಗತಿಸಿ, ಸುರೇಂದ್ರ ಸಂಗಮ್ ಕಾರ್ಯಕ್ರಮ ನಿರೂಪಿಸಿದರು.






