ರಾಯಚೂರು ದಲಿತ ಮಹಿಳೆಯರ ಆತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ

ಉಡುಪಿ, ಸೆ.21: ರಾಯಚೂರಿನಲ್ಲಿ ದಲಿತ ಮಹಿಳೆಯರ ಮೇಲೆ ನಿರಂತರ ಆತ್ಯಾಚಾರ, ಕೊಲೆ ಖಂಡಿಸಿ ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಸಮಿತಿ, ಸಿಐಟಿಯು ಉಡುಪಿ ಜಿಲ್ಲಾ ಸಮಿತಿ, ಜನವಾದಿ ಮಹಿಳಾ ಸಂಘಟನೆ ಉಡುಪಿ ಜಿಲ್ಲಾ ಸಮಿತಿ, ಡಿವೈಎಫ್‌ಐ, ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ, ಕೃಷಿಕೂಲಿಕಾರರ ಸಂಘ ಮತ್ತು ಸಮಾನ ಮನಸ್ಕ ಸಂಘಟನೆಗಳು ಜಂಟಿಯಾಗಿ ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದವು.
ಪ್ರತಿಭಟನೆಯನ್ನುದ್ದೇಶಿಸಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿ, ರಾಯಚೂರು ದಲಿತ ದೌರ್ಜನ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು. ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕು ಮತ್ತು ಸಂತ್ರಸ್ತ ಕುಟುಂಬಗಳಿಗೆ ರಕ್ಷಣೆ ಒದಗಿಸಬೇಕು. ಬಂಧಿಸಿರುವ ಆರೋಪಿ ಗಳನ್ನು ತ್ವರಿತ ವಿಚಾರಣೆಗೆ ಒಳಪಡಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ದಲಿತರ ದೌರ್ಜನ್ಯ ಶೀಘ್ರವಾಗಿ ಇತ್ಯರ್ಥ ಗೊಳಿಸಲು ತ್ವರಿತ ನ್ಯಾಯಲಯ ಸ್ಥಾಪಿಸ ಬೇಕು. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಮತ್ತು ಪ್ರತಿ ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ಅಥವಾ 5 ಎಕರೆ ಕೃಷಿ ಭೂಮಿ ನೀಡಬೇಕು. ಡಿಸಿಆರ್‌ಇ ಪೋಲಿಸ್ ಠಾಣೆಗಳನ್ನು ಹೆಚ್ಚಿಸಿ ತಕ್ಷಣ ಕ್ರಮ ಜರಗಿಸಿ ಬಲಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಚಿಂತಕ ಪ್ರೊ.ಹಯವದನ ಮೂಡಸಗ್ರಿ ಮಾತನಾಡಿ, ಇಂದು ಸಮಾಜ ದಲ್ಲಿ ಮೂಢನಂಬಿಕೆ, ಜಾತಿಯಾತೆ ಜಾಸ್ತಿಯಾಗಿದೆ. ಸ್ವಾತಂತ್ರ್ಯ ದೊರೆತು 80ವರ್ಷಗಳಾದರೂ ಇನ್ನು ನಮಲ್ಲಿ ಸಮಾನತೆಯೇ ಬಂದಿಲ್ಲ. ಸರಕಾರ ಬಡವರ, ದಲಿತರ ವಿರುದ್ಧ ಹಾಗೂ ಉಳ್ಳವರ ಹಣವಂತರ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಅಧಿಕಾರಿಗಳಿಗೆ ಮೊದಲು ಸಂವಿಧಾನ ಪಾಠ ಹಾಗೂ ಮನುಷ್ಯತ್ವ ಕಲಿಸಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಕಾರ್ಯದರ್ಶಿ ರವಿ.ವಿ.ಎಂ., ಮುಖಂಡರಾದ ಅಶ್ವಿನಿ ಲಾರೆನ್ಸ್ ಮೂಡುಬೆಳ್ಳೆ, ಮನೋಜ್ ಕುಮಾರ್, ನಾಗರತ್ನ ಆರ್.ನಾಡ, ಸುಶೀಲಾ ಬಳ್ಕೂರು, ಅಣ್ಣಪ್ಪ ಬಳ್ಕೂರು, ಬಾಬು ಬಳ್ಕೂರು, ದಯನಂದ ಮಲ್ಪೆ, ರಾಮ ಕಾರ್ಕಡ, ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ಶಶಿಧರ್ ಗೊಲ್ಲ, ಕಾರ್ಯದರ್ಶಿ ಚಂದ್ರಶೇಖರ ವಿ., ಕೋಶಾಧಿಕಾರಿ ಕವಿರಾಜ್ ಎಸ್.ಕಾಂಚನ್, ಉಪಾಧ್ಯಕ್ಷ ಎಚ್.ನರಸಿಂಹ, ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಡಿವೈಎಫ್‌ಐ ಮುಖಂಡರಾದ ಸೈಯಾದ್, ಮುರಳಿ ಜನವಾದಿ ಮಹಿಳಾ ಸಂಘದ ಜಿಲ್ಲಾ ಕಾರ್ಯದರ್ಶಿ ಶೀಲಾವತಿ, ಮುಖಂಡರಾದ ಬಲ್ಕೀಸ್, ಸುನೀತಾ ಶೆಟ್ಟಿ, ಕೃಷಿಕೂಲಿಕಾರ ಸಂಘದ ಜಿಲ್ಲಾ ಮುಖಂಡರಾದ ನಾಗರತ್ನ ನಾಡ, ಇದ್ರೀಸ್ ಹೂಡೆ ಉಪಸ್ಥಿತರಿದ್ದರು. ಬಳಿಕ ಅಪರ ಜಿಲ್ಲಾಧಿಕಾರಿ ಆಬೀದ್ ಗದ್ಯಾಳ್ ಮೂಲಕ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ನೀಡಲಾಯಿತು.






