ಗ್ರಾಪಂ ನೌಕರರಿಗೆ ಪದೋನ್ನತಿಯಲ್ಲಿ ವಂಚನೆ: ಸೂಕ್ತ ಕ್ರಮಕ್ಕೆ ದಸಂಸ ಒತ್ತಾಯ

ಉಡುಪಿ, ಸೆ.21: ಉಡುಪಿ ಜಿಲ್ಲಾ ಪಂಚಾಯತ್‌ನಲ್ಲಿ 2012ರಲ್ಲಿ ಪದೋನ್ನತಿ ಹೊಂದಿದ್ದ ಪ.ಜಾತಿ/ಪಂಗಡ ಮತ್ತು ಹಿಂದುಳಿದ ವರ್ಗದ ಸೇವಾ ಹಿರಿತನ ಹೊಂದಿರುವ ಪಂಚಾಯತ್ ನೌಕರರನ್ನು ವಂಚಿಸಿ 2014ರಲ್ಲಿ ನೇರ ನೇಮ ಕಾತಿ ಹೊಂದಿರುವ ದ್ವಿತೀಯ ದರ್ಜೆ ಸಹಾಯಕರು ಮತ್ತು ಕಾರ್ಯದರ್ಶಿಗಳಿಗೆ ಗ್ರೇಡ್-1 ಕಾರ್ಯದರ್ಶಿ ಹುದ್ದೆಗಳಿಗೆ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ನೇರವಾಗಿ ಪದೋನ್ನತಿ ನೀಡಿದ್ದು, ಇದರಿಂದ 2012ರಲ್ಲಿ ಪದೋನ್ನತಿ ನೌಕರರಿಗೆ ಅನ್ಯಾಯ ಎಸಗಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್ ಆರೋಪಿಸಿದ್ದಾರೆ.
2012ರಲ್ಲಿ ಪದೋನ್ನತಿ ಹೊಂದಿರುವ ಪ.ಜಾತಿ/ಪ.ಪಂಗಡ ಮತ್ತು ಹಿಂದುಳಿದ ವರ್ಗದ ನೌಕರರಿಗೆ ಮಾಡಿರುವ ಅನ್ಯಾಯವನ್ನು ಸರಿಪಡಿಸಬೇಕು. 2014ರಲ್ಲಿ ನೇರ ನೇಮಕಾತಿಯಿಂದ ಬಂದಿರುವ ನೌಕರರ ಪದೋನ್ನತಿಯನ್ನು ಕಾನೂನುಬಾಹಿರವಾಗಿ ಮಾಡಿರುವುದರಿಂದ ಅವರನ್ನು ಕೈಬಿಟ್ಟು 2012ರಲ್ಲಿ ಪದೋನ್ನತಿಯವರಿಗೆ ಗ್ರೇಡ್-1 ಕಾರ್ಯದರ್ಶಿ ಹುದ್ದೆಗಳಿಗೆ ಪದೋನ್ನತಿ ಮಾಡುವ ಬಗ್ಗೆ ಈಗಾಗಲೇ ಕಾರ್ಯನಿರ್ವ ಹಣಾಧಿಕಾರಿಯವರಿಗೆ ಸಂಘಟನೆ ಮನವಿ ಮಾಡಿದ್ದು, ಈ ಬಗ್ಗೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಅನ್ಯಾಯಕ್ಕೊಳಗಾದ ನೌಕರರಿಗೆ ಸೂಕ್ತ ನ್ಯಾಯ ದೊರಕಿಸಬೇಕು. ಈ ಬಗ್ಗೆ ಅನ್ಯಾಯವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸುಂದರ್ ಮಾಸ್ತರ್ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.






