ಕಂಡ್ಲೂರು: ಹೊಸ ಸೇತುವೆ ನಿರ್ಮಾಣಕ್ಕೆ ಸಚಿವ ಸಂಪುಟ ಗ್ರೀನ್ ಸಿಗ್ನಲ್
ನೂತನ ಸೇತುವೆ ಪೂರ್ಣಗೊಳ್ಳುವರೆಗೆ ಹಳೆಸೇತುವೆ ಉಳಿಸಲು ಆಗ್ರಹ

ಕುಂದಾಪುರ, ಸೆ.21: ತೀರ್ಥಹಳ್ಳಿ- ಕುಂದಾಪುರ ರಾಜ್ಯ ಹೆದ್ದಾರಿಯ ಕಂಡ್ಲೂರಿನ ಹಳೆ ಸೇತುವೆ ಶಿಥಿಲಾವಸ್ಥೆಯ ಹಿನ್ನೆಲೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ 55 ಕೋ.ರೂ. ಅನುದಾನಕ್ಕೆ ಅನುಮೋದನೆ ನೀಡಿದೆ. ಆದರೆ ಈಗ ಈ ಶಿಥಿಲಾವಸ್ಥೆಯ ಸೇತುವೆ ತೆರವು ಅನಿವಾರ್ಯ ಎಂಬುದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಾದವಾದರೆ, ಹೊಸ ಸೇತುವೆ ಆಗುವವರೆಗೆ ಹಳೆ ಸೇತುವೆ ಉಳಿಸಿಕೊಳ್ಳ ಬೇಕು ಎಂಬುದು ಜನಾಗ್ರಹವಾಗಿದೆ. ಹೀಗಾಗಿ ಕಂಡ್ಲೂರಿನ ಈ ಹಳೆಯ ಸೇತುವೆ ತೆರವು ಹಾಗೂ ಹೊಸ ಸೇತುವೆ ನಿರ್ಮಾಣದ ವಿಚಾರವೂ ಈಗ ಗೊಂದಲದ ಗೂಡಾಗಿ ಪರಿಣಮಿಸಿದೆ.
ಯಡ್ತರೆ ಮಂಜಯ್ಯ ಶೆಟ್ಟರು ಬೈಂದೂರು ಶಾಸಕರಾಗಿದ್ದ ವೇಳೆ 1977 ರಲ್ಲಿ ವಾರಾಹಿ ನದಿಗೆ ಕಂಡ್ಲೂರಿನಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಪ್ರತಿ ನಿತ್ಯ ಈ ಸೇತುವೆಯಲ್ಲಿ 20 ಸಾವಿರಕ್ಕೂ ಮಿಕ್ಕಿ ವಾಹನಗಳು ಸಂಚರಿಸು ತ್ತವೆ. 2017-18ರ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ಪ್ರಾಮ್ಸಿ(ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರ) ವಿಭಾಗದಿಂದ ಸೇತುವೆಗಳ ಬಾಳಿಕೆ ಹಾಗೂ ಧಾರಣಾ ಸಾಮರ್ಥ್ಯ ನಡೆಸುವ ಯಂತ್ರದ ಮೂಲಕ ತಪಾಸಣೆ ನಡೆಸಲಾಗಿತ್ತು. 2017ರ ಅ.23ರಂದು ಪ್ರಾಮ್ಸಿಯು ಇದರ ದುರಸ್ತಿ ಅಗತ್ಯವಿದೆಯೆಂದು ವರದಿ ತಯಾರಿಸಿ, ಸರಕಾರಕ್ಕೆ ನೀಡಿತ್ತು.
ಈ ಸೇತುವೆಯು 300 ಮೀ. ಉದ್ದವಿದ್ದು, 7.5 ಅಗಲವಿದೆ. ಹಲವು ವರ್ಷಗಳಿಂದ ಸೇತುವೆ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಮಧ್ಯೆ ಬೃಹದಾಕಾರದ ಕಂದಕ ಸೃಷ್ಟಿಯಾಗಿದೆ. ಕೆಲವೆಡೆಯಂತೂ ಡಾಮರು, ಕಾಂಕ್ರಿಟ್ ಎದ್ದು ಹೋಗಿ, ಕಬ್ಬಿಣದ ರಾಡ್‌ಗಳು ಕಾಣುತ್ತಿದೆ. ಆದರೆ ಇಷ್ಟು ದಿನ ಅನುದಾನ ಬಿಡುಗಡೆಯಾಗದೇ ಹೊಸ ಸೇತುವೆ ನಿರ್ಮಾಣಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಈಗ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ 55 ಕೋ.ರೂ. ಅನುದಾನಕ್ಕೆ ಅನುಮೋದನೆ ನೀಡಿದೆ.
ಬಾರ್ಜ್‌ಗೆ ಬೇಡಿಕೆ: ಇದು ರಾಜ್ಯ ಹೆದ್ದಾರಿ- 52 ಹಾದುಹೋಗುವ ಸೇತುವೆಯಾಗಿದ್ದು ಕುಂದಾಪುರದಿಂದ ಕಂಡ್ಲೂರು, ಅಂಪಾರು, ಸಿದ್ದಾಪುರ, ಹೊಸಂಗಡಿ ಕಡೆಗೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.
ತೀರ್ಥಹಳ್ಳಿ, ಶಿವಮೊಗ್ಗ ಕಡೆಗೆ ಸಂಪರ್ಕವೂ ಇದೇ ಸೇತುವೆಯ ಮೂಲಕವೇ ಆಗುತ್ತದೆ. ಸಿದ್ದಾಪುರ, ಶಂಕರ ನಾರಾಯಣ, ಅಂಪಾರು, ಕಂಡ್ಲೂರು ಭಾಗದವರಿಗೆ ಕುಂದಾಪುರಕ್ಕೆ ತೆರಳಲು ಈ ಸೇತುವೆಯನ್ನೇ ಆಶ್ರಯಿಸಿದ್ದಾರೆ. ಪ್ರತಿ ನಿತ್ಯ ಹತ್ತಾರು ಬಸ್ಗಳು ಈ ಸೇತುವೆಯಾಗಿ ತೆರಳುತ್ತವೆ. ಅಂಪಾರು, ಕಂಡ್ಲೂರು ಭಾಗದಿಂದ ಕುಂದಾಪುರ, ಕೋಟೇಶ್ವರ ಶಾಲಾ - ಕಾಲೇಜಿಗೆ ಹೋಗುವ ನೂರಾರು ಮಂದಿ ವಿದ್ಯಾರ್ಥಿಗಳಿದ್ದಾರೆ.
20 ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಹೊಸ ಸೇತುವೆ ಆಗದೇ, ಇರುವಂತಹ ಹಳೆಯ ಸೇತುವೆ ಯನ್ನು ಕೆಡವಿದರೆ, ಈ ಭಾಗದ ಸಾವಿರಾರು ಜನರಿಗೆ ಸಂಚಾರಕ್ಕೆ ಸಮಸ್ಯೆಯಾಗಲಿದೆ. ಇದರಿಂದ 2-3 ವರ್ಷಗಳ ಕಾಲ ಜನರಿಗೆ ತೊಂದರೆಯಾಗಲಿದೆ. ಅದಕ್ಕಾಗಿ ಹೊಸ ಸೇತುವೆ ಮೊದಲು ಮಾಡಿ, ಆ ಬಳಿಕ ಹಳೆ ಸೇತುವೆ ತೆರವು ಮಾಡಿ ಅನ್ನುವುದು ಜನರ ವಾದ.
‘ಹೊಸ ಸೇತುವೆ ನಿರ್ಮಾಣ ಪೂರ್ಣಗೊಳ್ಳಲು 3 ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೆ ಶಿವಮೊಗ್ಗ, ತೀರ್ಥಹಳ್ಳಿ, ಸಿದ್ದಾಪುರ ಕಡೆಯಿಂದ ಬರುವ ಬಸ್ಸು ಮತ್ತು ಸರಕು ಸಾಗಾಟದ ವಾಹನಗಳಿಗೆ ನೇರ ಕುಂದಾಪುರಕ್ಕೆ ಸರಿಯಾದ ಮಾರ್ಗದ ವ್ಯವಸ್ಥೆಗಳು ಇಲ್ಲ. ಆದುದರಿಂದ ಹಳೆ ಸೇತುವೆ ತೆರವು ಅನಿವಾರ್ಯವಾದರೆ, ಹೊಸ ಸೇತುವೆ ಆಗುವವರೆಗೆ ಬಾರ್ಜ್ ವ್ಯವಸ್ಥೆಯನ್ನಾದರೂ ಮಾಡಬೇಕು. ಇಲ್ಲದಿದ್ದರೆ, ಅಂಪಾರು, ಕಂಡ್ಲೂರು ಭಾಗದ ಜನರಿಗೆ ಬಸ್ರೂರು, ಕುಂದಾಪುರಕ್ಕೆ ಹೋಗಲು ತುಂಬಾ ತೊಂದರೆ ಆಗಲಿದೆ’ ಎನ್ನುತ್ತಾರೆ ಸ್ಥಳೀಯರಾದ ಮುಂಬಾರು ದಿನಕರ ಶೆಟ್ಟಿ.
‘ಹೊಸ ಸೇತುವೆಗೆ 55 ಕೋ.ರೂ. ಅನುದಾನಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಶೀಘ್ರ ಟೆಂರ್ಡ ಕರೆಯಲಾಗುವುದು. ಇತ್ತೀಚೆಗೆ ಶಿವಮೊಗ್ಗದ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿರ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಹಳೆ ಸೇತುವೆ ತೆಗೆದು ಮಾಡಬೇಕೆನ್ನುವ ಪ್ರಸ್ತಾವನೆಯಿದೆ. ಉಳಿಸಿಕೊಂಡು ಹೊಸ ಸೇತುವೆ ಮಾಡುವುದಾದರೆ ಭೂಸ್ವಾಧೀನಕ್ಕಾಗಿ ಹೆಚ್ಚುವರಿ ಅನುದಾನ ಬೇಕಾಗುತ್ತದೆ. ಅದೆಲ್ಲ ಸರಕಾರದ ಮಟ್ಟದಲ್ಲಿ ಆಗಬೇಕಾಗಿದೆ. ಹೊಸ ಸೇತುವೆ ಆಗಲು ಕನಿಷ್ಠ 2 ವರ್ಷ ಬೇಕಾಗಬಹುದು’
-ಮಹಾಬಲ ನಾಯ್ಕ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಕುಂದಾಪುರ
‘ಇಷ್ಟು ವರ್ಷ ಶಿಥಿಲಗೊಂಡ ಸೇತುವೆಯಲ್ಲಿಯೇ ವಾಹನಗಳು ಸಂಚರಿಸುತ್ತಿದ್ದರೂ, ಈವರೆಗೆ ಸ್ಥಗಿತ ಮಾಡಿಲ್ಲ. ಸುರಕ್ಷತಾ ದೃಷ್ಟಿಯಿಂದ 10 ಚಕ್ರದ ಸಹಿತ ಘನ ವಾಹನಗಳ ಸಂಚಾರ ಸ್ಥಗಿತಗೊಳಿಸಲಿ. ಬೇರೆ ಮಾರ್ಗದಲ್ಲಿ ಸಂಚರಿಸಲಿ. ಸೇತುವೆ ತೆಗೆದು ಎಲ್ಲ ವಾಹನ ಸಂಚಾರ ಸ್ಥಗಿತ ಮಾಡಿದರೆ ನಿತ್ಯದ ಸಂಚಾರಕ್ಕೆ ಸಮಸ್ಯೆಯಾಗಲಿದೆ. 2-3 ವರ್ಷ ಬೇಕಾಗಬಹುದು. ಅಂಪಾರು ಮೂಲಕ ನೇರಳಕಟ್ಟೆ ಮಾರ್ಗದಲ್ಲಿ ಘನ ವಾಹನಗಳು ಸಂಚರಿಸುವುದು ಕಷ್ಟ. ಸೌಕೂರು ಸೇತುವೆ ಕೂಡ ಕಿರಿದಾಗಿದೆ’
- ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ಸೇತುವೆ ಹೋರಾಟ ಸಮಿತಿ
‘ಸೇತುವೆ ಶಿಥಿಲಗೊಂಡಿರುವುದು ಸತ್ಯ. ಹಾಗಂತ ರಾಜ್ಯ ಹೆದ್ದಾರಿ ಸ್ಥಗಿತಗೊಳಿಸುವುದು ಕಷ್ಟ. ಹೊಸ ಸೇತುವೆ ಮೊದಲು ಮಾಡಲಿ. 20 ಸಾವಿರಕ್ಕೂ ಅಧಿಕ ವಾಹನ ಸಂಚರಿಸುತ್ತವೆ. 20 ಶಾಲಾ ವಾಹನಗಳು ಕೂಡ ತೆರಳುತ್ತವೆ. ಹಳೆ ಸೇತುವೆ ತೆರವಿಗೆ ವಿರೋಧವಿದೆ’
- ಸದಾನಂದ ಬಳ್ಕೂರು, ಸ್ಥಳೀಯರು






