'ಹೆಬ್ರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿ ರದ್ದು'
ಮರು ಚುನಾವಣೆ ನಡೆಸಲು ಆದೇಶ

ಹೆಬ್ರಿ, ಸೆ.21: ಹೆಬ್ರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿವೆ ಎಂಬುದು ಸಾಬೀತುಗೊಂಡ ಬಳಿಕ ಆಡಳಿತ ಮಂಡಳಿಯನ್ನು ರದ್ದುಗೊಳಿಸಿ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ ಬೆಂಗಳೂರು ಆದೇಶ ನೀಡಿದೆ.
2023ರ ಜುಲೈ 9 ರಂದು ಸಂಘದ ಚುನಾವಣೆ ನಡೆದಿತ್ತು. ಇದೀಗ ಆಡಳಿತ ಮಂಡಳಿಯನ್ನು ರದ್ದು ಮಾಡಿ ಹೊಸ ದಾಗಿ ಚುನಾವಣೆಯನ್ನು ನಡೆಸಬೇಕು, ಆ ತನಕ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿಂದೆಯೇ ಚುನಾವಣೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಕುಂದಾಪುರ ಸಹಕಾರಿ ಸಂಘಗಳ ನಿಬಂಧಕರು ನೀಡಿದ್ದ ತೀರ್ಪನ್ನು ನ್ಯಾಯಾಧೀಕರಣ ಎತ್ತಿ ಹಿಡಿದಿದೆ. ಸದ್ರಿ ಇರುವ ಆಡಳಿತ ಮಂಡಳಿಯು ಯಾವೂದೇ ವ್ಯವಹಾರ ನಡೆಸ ದಂತೆಯೂ ನ್ಯಾಯಾಲಯ ಆದೇಶಿಸಿದೆ.
ಆದರೆ ನ್ಯಾಯಲಯದ ಆದೇಶ ಬಂದ ಬಳಿಕವೂ ಕಾನೂನು ಮತ್ತು ನ್ಯಾಯಾಧೀಕರಣದ ತೀರ್ಪನ್ನು ಉಲ್ಲಂಘಿಸಿ ಆಡಳಿತ ಮಂಡಳಿಯ ಸಭೆ ಮತ್ತು ವಾರ್ಷಿಕ ಮಹಾಸಭೆಯನ್ನು ನಡೆಸಲಾಗಿದೆ ಎಂದು ದೂರುದಾರರಾಗಿರುವ ಹೆಬ್ರಿ ಸಹಕಾರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.




