ಎನ್‌ಜಿಒಗಳ ಜೊತೆಗೂಡಿ ಸ್ವಚತ್ಛೆಗಾಗಿ ಹೊಸ ಕಾರ್ಯಕ್ರಮ: ಡಿಸಿ ಸ್ವರೂಪಾ ಟಿ.ಕೆ.

ಉಡುಪಿ, ಸೆ.23: ಪೌರಕಾರ್ಮಿಕರು ನಗರವನ್ನು ಸ್ವಚ್ಛವಾಗಿಡುವಲ್ಲಿ ನಿರ್ವಹಿಸುತ್ತಿರುವ ಕಾರ್ಯ ಶ್ಲಾಘನೀಯ ಹಾಗೂ ಪೌರಕಾರ್ಮಿಕರ ಕೆಲಸ ಕಾರ್ಯಕ್ಕೆ ಸಹಕಾರ ನೀಡುವ ಸಲುವಾಗಿ ಎನ್.ಜಿ.ಒಗಳ ಜೊತೆಗೂಡಿ ಹೊಸ ಕಾರ್ಯವನ್ನು ರೂಪಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಪೌರಕಾರ್ಮಿಕರ ಸ್ವಚ್ಛತಾ ಕಾರ್ಯ ಮತ್ತಷ್ಟು ಸುಲಭವಾಗಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.
ಉಡುಪಿ ನಗರಸಭೆ ವತಿಯಿಂದ ಅಜ್ಜರಕಾಡು ಪುರಭವನದಲ್ಲಿ ಬುಧವಾರ ಆಯೋಜಿಸಲಾದ ಪೌರಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಕೂಡ್ಲು ಮಾತನಾಡಿ, ಉಡುಪಿ ನಗರ ಸ್ವಚ್ಛವಾಗಿದೆ ಎಂದರೆ ಅದರಲ್ಲಿ ಪೌರಕಾರ್ಮಿಕರ ಪಾತ್ರ ಬಹುಮುಖ್ಯವಾದುದು ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಕೂಡ ಕಾಳಜಿ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ ಪಿ., ಪೌರಾಯುಕ್ತ ಮಹಾಂತೇಶ್ ಹಂಗರಗಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಅನೀತಾ ಮಡ್ಲೂರು, ಕಚೇರಿ ವ್ಯವಸ್ಥಾಪಕ ಮಂಜು ನಾಥ ಕೆಎಸ್, ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್, ಪರಿಸರ ಅಭಿಯಂತರ ರವಿ ಪ್ರಕಾಶ್, ಕಂದಾಯ ಅಧಿಕಾರಿ ನಾಗರಾಜ್, ಲೆಕ್ಕಾಧೀಕ್ಷಕ ಕೃಷ್ಣರಾಮ ದೇವಾಡಿಗ, ಪೌರ ನೌಕರರ ಸಂಘದ ಅಧ್ಯಕ್ಷೆ ಬೇಬಿ ಹಾಗೂ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪೌರಕಾರ್ಮಿಕರಿಗಾಗಿ ಆಯೋಜಿಸಿದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಇದರ ಜೊತೆಗೆ ಅಭಿನವ ಕಲಾವಿದರ ತಂಡದವರಿಂದ ರಾಂಗ್ ರೂಟ್ ಎಂಬ ಹಾಸ್ಯ ನಾಟಕ ಪ್ರದರ್ಶನ ನಡೆಯಿತು.
ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಬೆಳಗ್ಗೆ ಉಡುಪಿ ನಗರಸಭಾ ಕಚೇರಿಯಿಂದ ಡೋಲು ನಾದ ದೊಂದಿಗೆ ಪುರಭವನದ ವರೆಗೆ ಮೆರವಣಿಗೆಯನ್ನು ನಡೆಸಲಾಯಿತು. ಆ ಬಳಿಕ ಪೌರಕಾರ್ಮಿಕರ ಆರೋಗ್ಯ ತಪಾಸಣೆಯ ಭಾಗವಾಗಿ ಪ್ರಸಾದ್ ನೇತ್ರಾಲಯದ ವತಿಯಿಂದ ಕಣ್ಣಿನ ತಪಾಸನೆಯನ್ನು ನಡೆಸಲಾಯಿತು.






