ಕನ್ನಡ ಭಾಷಿಕ ಗುರುತು ನಮ್ಮ ಹೆಮ್ಮೆ: ಪ್ರೊ.ಬಿ.ಶಿವರಾಮ ಶೆಟ್ಟಿ

ಉಡುಪಿ, ಸೆ.23: ಮನುಷ್ಯನನ್ನು ಹಲವು ಪಾತ್ರಗಳು ಹಾಗೂ ಗುರುತುಗಳ ಮೂಲಕ ಗುರುತಿಸಲಾಗುತ್ತದೆ ಯಾದರೂ, ಕನ್ನಡ ಭಾಷಿಕ ಗುರುತು ನಮ್ಮ ಹೆಮ್ಮೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಶಿವರಾಮ ಶೆಟ್ಟಿ ಹೇಳಿದ್ದಾರೆ.
ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಮತ್ತು ಐ.ಕ್ಯೂ.ಎ.ಸಿ., ಗಿಳಿವಿಂಡು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಆಯೋಜಿಸಲಾದ ‘ನಮ್ಮ ಕನ್ನಡ-ನಮ್ಮ ಗುರುತು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮನುಷ್ಯ ಹಲವು ಗುರುತುಗಳನ್ನು ಹೊಂದಿದ್ದು, ಈ ಬಹು ಗುರುತುಗಳ ವಿವಿಧ ಪದರಗಳನ್ನು ದಾಟಿ ಆತ ವಿಶ್ವಮಾನವನಾಗಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ.ನಿಕೇತನ ಮಾತನಾಡಿ, ಕನ್ನಡ ಸ್ವಾಭಿಮಾನದ ಭಾಷೆ. ಶಿಕ್ಷಣವು ಕೇವಲ ಅಂಕಗಳನ್ನು ಗಳಿಸುವ ಸಾಧನವಾಗದೆ, ನೈತಿಕತೆ ಹಾಗೂ ಸಚ್ಚಾರಿತ್ರ್ಯವನ್ನು ರೂಪಿಸುವಂತಾಗಬೇಕು ಎಂದು ಹೇಳಿದರು.
ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಬಿ.ಪ್ರಸನ್ನ ಸ್ವಾಗತಿಸಿದರು. ವಿದ್ಯಾರ್ಥಿನಿ ಸಮೀಕ್ಷಾ, ಭವ್ಯಶ್ರೀ ಪ್ರಾರ್ಥಿಸಿದರು. ಉಪನ್ಯಾಸಕಿ ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಚಂದ್ರ ಪಂದ ಪಾಟೀಲ್ ವಂದಿಸಿದರು.






