ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ಎಚ್‌ಐವಿ/ಏಡ್ಸ್‌ಜಾಗೃತಿ ಕಾರ್ಯಕ್ರಮ

ಕುಂದಾಪುರ, ಸೆ.25: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಘಟಕದ ಅಡಿಯಲ್ಲಿ ರೆಡ್ ರಿಬ್ಬನ್ ಕ್ಲಬ್ ಹಾಗೂ ಯೂತ್ ರೆಡ್ ಕ್ರಾಸ್ ಘಟಕಗಳ ಜಂಟಿ ಆಶ್ರಯದಲ್ಲಿ ಎಚ್.ಐ.ವಿ ಮತ್ತು ಏಡ್ಸ್ ಜಾಗೃತಿ’ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕಿ ನಳಿನಾಕ್ಷಿ ಭಾಗವಹಿಸಿ, ಎಚ್.ಐ.ವಿ ಮತ್ತು ಏಡ್ಸ್ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿ, ಜಾಗೃತಿ ಮೂಡಿಸಿದರು.
ಕಾಲೇಜಿನ ಪ್ರಾಂಶುಪಾಲೆ ಶಬೀನಾ ಹಂಝಾ ಮಾತನಾಡಿ, ನಮ್ಮ ಆರೋಗ್ಯ ಮತ್ತು ಭವಿಷ್ಯ ನಮ್ಮ ಕೈಯಲ್ಲಿದೆ. ಆರೋಗ್ಯಕರ ಜೀವನಶೈಲಿ, ಪೌಷ್ಟಿಕ ಆಹಾರ ಹಾಗೂ ಎಚ್‌ಐವಿ ಕುರಿತು ಸರಿಯಾದ ಅರಿವು ಅತ್ಯಂತ ಅಗತ್ಯ. ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸುವುದರ ಜೊತೆಗೆ, ಜವಾಬ್ದಾರಿ ಯುತ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ವಹಿಸಿದ್ದರು. ರೆಡ್ ರಿಬ್ಬನ್ ಕ್ಲಬ್‌ನ ಸಂಯೋಜಕ ಜಯಂತ್ ಕುಮಾರ್ ಹಾಗೂ ಅಶಿದಾ ಬಾನು, ಯೂತ್ ರೆಡ್‌ಕ್ರಾಸ್ ಸಂಯೋಜಕ ಅಹಮ್ಮದ್ ಖಲೀಲ್ ಹಾಗೂ ಸಹಾರಾ, ವಿದ್ಯಾರ್ಥಿ ಸಂಯೋಜಕರಾದ ಸಾಜನ್ ಮತ್ತು ವಹಾಬ್, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಆಯೇಶ ನಿಫಾ ಕಾರ್ಯಕ್ರಮ ನಿರೂಪಿಸಿದರು. ಗಣಕ ವಿಭಾಗದ ಮುಖ್ಯಸ್ಥೆ ನೂತನ್ ಎಸ್.ಸ್ವಾಗತಿಸಿದರು. ಅಹಮ್ಮದ್ ಖಲೀಲ್ ವಂದಿಸಿದರು.






