ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಆಗ್ರಹಿಸಿ ಧರಣಿ

ಉಡುಪಿ, ಸೆ.25: ಎಸ್‌ಐಆರ್ ಪ್ರಕ್ರಿಯೆ ಹೆಸರಿನಲ್ಲಿ ವಿಶ್ವಾಸದ್ರೋಹ ಎಸಗಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಒತ್ತಾಯಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಶುಕ್ರವಾರ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಧರಣಿ ಹಮ್ಮಿಕೊಳ್ಳಲಾಗಿತ್ತು.
ಸಾಮಾಜಿಕ ಕಾರ್ಯಕರ್ತ ಅಮೃತ್ ಶೆಣೈ ಮಾತನಾಡಿ, ಸ್ವತಂತ್ರವಾಗಿ ಕಾರ್ಯಾಚರಿಸಬೇಕಾದ ಚುನಾವಣಾ ಆಯೋಗವು ಆಡಳಿತಾರೂಢ ಪಕ್ಷದ ಯುವಮೋರ್ಚಾದಂತೆ ಕೆಲಸ ಮಾಡುತ್ತಿರುವುದು ಆಘಾತಕಾರಿ. ಇಂದು ದೇಶದಲ್ಲಿ ಬಡವರು, ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ, ಅವರನ್ನು ನೇರವಾಗಿ ಎದುರಿಸಲಾಗದೆ ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಇಲ್ಲಸಲ್ಲದ ದಾಖಲೆಗಳನ್ನು ಕೇಳಿ ಸಾರ್ವಜನಿಕರಿಗೆ ಕಿರುಕುಳ ನೀಡ ಲಾಗುತ್ತಿದೆ. ಸಂಘಪರಿವಾರದ ನಾಯಕರು ವಿದೇಶಕ್ಕೆ ಹೋದಾಗ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ದೇಶದೊಳಗೆ ಹಿಂದುತ್ವದ ಮುಖವಾಡ ಹೊತ್ತು ಶ್ರೀಮಂತರಿಗಾಗಿ ಕೆಲಸ ಮಾಡುತ್ತಿದೆ. ಬೀಫ್ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಕೇಂದ್ರ ಸರಕಾರದ ಎಲ್ಲಾ ಧೋರಣೆಗಳು ಡೋಂಗಿತನದಿಂದ ಕೂಡಿದೆ ಎಂದು ಅವರು ದೂರಿದರು.
ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಇದ್ರಿಸ್ ಹೂಡೆ ಮಾತನಾಡಿ, ಚುನಾವಣಾ ಆಯೋಗವು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ ಹಾಗೂ ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಮತದಾರರಿಗೆ ವಿಶ್ವಾಸದ್ರೋಹ ಎಸಗುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಹಂತ ಹಂತವಾಗಿ ಮುಗಿಸಿ ರಾಜಸತ್ತೆ ಯತ್ತ ಕೊಂಡೊಯ್ಯುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಬರಿ ಪ್ರಹಸನವಾಗಿ ಮಾರ್ಪಟ್ಟಿದ್ದು, ಪೂರ್ವ ನಿರ್ಧರಿತವಾಗಿ ಸೋಲು-ಗೆಲುವು ಗಳನ್ನು ನಿರ್ಧರಿಸಲಾಗುತ್ತಿದೆ ಎಂದು ಆರೋಪಿಸಿದರು.
ದಲಿತ ಹಿತರಕ್ಷಣಾ ವೇದಿಕೆಯ ಸಂಜೀವ ಬಳ್ಕೂರು ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯು ಸಂವಿಧಾನ ವಿರೋಧಿ ಹಾಗೂ ದೇಶದ್ರೋಹಿ ನಡವಳಿಕೆಯಾಗಿದೆ. ಸಂವಿಧಾನ ನೀಡಿದ ಪವಿತ್ರ ಮತದಾನದ ಹಕ್ಕಿನಿಂದ ಜನರನ್ನು ವಂಚಿಸಲಾಗುತ್ತಿದ್ದು, ಈ ಕಾಯಿದೆಯನ್ನು ಯಾವುದೇ ಪೂರ್ವನ್ವಯವಿಲ್ಲದೆ ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಪ್ರಮುಖರಾದ ಕುಶಲ, ವೆಲ್ಫೇರ್ ಪಾರ್ಟಿಯ ಉಪಾಧ್ಯಕ್ಷ ವಿಜಯ ಪಡುಕುದ್ರು, ಸಾಮಾಜಿಕ ಹೋರಾಟ ಗಾರ ಚಾರ್ಲ್ಸ್ ಅಂಬ್ಲೇರ್, ಅನ್ವರ್ ಅಲಿ ಕಾಪು, ಆಸೀಪ್ ಜಿಡಿ, ಮಮ್ತಾಝ್ ಹೂಡೆ, ಅಬ್ದುಲ್ ರಝಾಕ್ ನಕ್ವಾ ಮೊದಲಾದವರು ಉಪಸ್ಥಿತರಿದ್ದರು. ಅಬ್ದುಲ್ ಅಝೀಜ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.
ಮುಖ್ಯ ಬೇಡಿಕೆಗಳು
ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತಂದಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುರ್ಮಾ ತಕ್ಷಣವೇ ರಾಜಿನಾಮೆ ನೀಡಬೇಕು. ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ಹಿಂಪಡೆಯಬೇಕು. ಪಟ್ಟಿಯಿಂದ ಅಕ್ರಮವಾಗಿ ತೆಗೆದುಹಾಕಲಾದ ಎಲ್ಲಾ ಮತದಾರರ ಹೆಸರುಗಳನ್ನು ತಕ್ಷಣವೇ ಮರು ಸೇರ್ಪಡೆಗೊಳಿಸಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಮತ್ತು ರಾಜಕೀಯ ಹಸ್ತಕ್ಷೇಪವನ್ನು ತಡೆಯಬೇಕು ಎಂದು ಧರಣಿನಿರತರು ಮುಖ್ಯಬೇಡಿಕೆಗಳನ್ನು ಮಂಡಿಸಿದರು.






