ಅಕಲಂಕ ದತ್ತಿ ಪುರಸ್ಕಾರಕ್ಕೆ ವಸಂತಿ ಶೆಟ್ಟಿ, ಡಾ. ಮಹಾಬಲೇಶ್ವರ ರಾವ್ ಆಯ್ಕೆ

ಉಡುಪಿ, ಸೆ.26: ಸಾಹಿತಿ, ಲೇಖಕ ಡಾ.ಉಪ್ಪಂಗಳ ರಾಮಭಟ್ಟ ಹಾಗೂ ಶಂಕರಿ ಆರ್.ಭಟ್ಟ ಪ್ರಾಯೋಜಿತ ಅಕಲಂಕ ದತ್ತಿ ಪುರಸ್ಕಾರಕ್ಕೆ ಖ್ಯಾತ ಶಿಕ್ಷಣ ತಜ್ಞ, ಸಾಹಿತಿ ಡಾ.ಮಹಾಬಲೇಶ್ವರ ರಾವ್ ಹಾಗೂ ಸಾಹಿತಿ ಅಂಕಣಗಾರ್ತಿ ವಸಂತಿ ಶೆಟ್ಟಿ ಬ್ರಹ್ಮಾವರ ಆಯ್ಕೆಯಾಗಿದ್ದಾರೆ.
ಡಾ.ಮಹಾಬಲೇಶ್ವರ ರಾವ್ ಅವರು 2025ನೇ ಸಾಲಿನ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರೆ, ವಸಂತಿ ಶೆಟ್ಟಿ ಬ್ರಹ್ಮಾವರ ಅವರು 2026ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಶಸ್ತಿಯು 15,000ರೂ. ನಗದು, ಫಲಪುಷ್ಪ, ಫಲಕಗಳನ್ನು ಒಳಗೊಂಡಿದ್ದು, ಅಕ್ಟೋಬರ್ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ಇಬ್ಬರಿಗೂ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ಮತ್ತು ನರೇಂದ್ರಕುಮಾರ್ ಕೋಟ ತಿಳಿಸಿದ್ದಾರೆ.
ನಾಲ್ಕು ದಶಕಗಳ ಕಾಲ ಕನ್ನಡ ಭಾಷಾ ಬೋಧನೆ, ಬರವಣಿಗೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ಮಹಾಬಲೇಶ್ವರ ಭಟ್ ಅವರು ಲೇಖಕ, ಅನುವಾದಕ, ಅಂಕಣಕಾರರಾಗಿ ಪ್ರಸಿದ್ಧರು, 14 ವರ್ಷಗಳ ಕಾಲ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸಾದನೆ ಮಾಡಿದ್ದಾರೆ. ಇವರ ‘ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು’ ಮಾನವಿಕ ಕೃತಿಗೆ 2019ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.
ಕನ್ನಡ-ತುಳು ಕವಯಿತ್ರಿ, ಬರಹಗಾರ್ತಿಯಾಗಿರುವ ವಸಂತಿ ಶೆಟ್ಟಿ ಬ್ರಹ್ಮಾವರ ಕಥೆಗಾರ್ತಿ, ಕಾದಂಬರಿಗಾರ್ತಿ ಹಾಗೂ ನಾಟಕಕಾರರಾಗಿರುವ ಗುರುತಿಸಿಕೊಂಡಿದ್ದಾರೆ. ಎರಡು ಅವಧಿಗೆ ನಗರಸಭಾ ಸದಸ್ಯರಾಗಿ ಆಯ್ಕೆಯಾ ಗಿದ್ದ ಇವರು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಇವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳು ದೊರಕಿವೆ.






