ಹಂಗಾರಕಟ್ಟೆ ಶ್ರೀಬಾಳಕುದ್ರು ಮಠಾಧೀಶರ ವಿರುದ್ಧ ಭಕ್ತರ ಪ್ರತಿಭಟನೆ; ಶ್ರೀವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಪೀಠತ್ಯಾಗಕ್ಕೆ ಹಕ್ಕೊತ್ತಾಯ
ಶ್ರೀಮಠ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಶಿಷ್ಯರು, ಭಕ್ತರಿಂದ ಧರಣಿ

ಹಂಗಾರಕಟ್ಟೆ (ಬ್ರಹ್ಮಾವರ), ಸೆ.26: ಜಿಲ್ಲೆಯ ಪ್ರಾಚೀನ ಮಠಗಳಲ್ಲೊಂದಾದ ಹಂಗಾರಕಟ್ಟೆಯ ಶ್ರೀಬಾಳಕುದ್ರು ಮಠದೊಳಗೆ ಮಠದ ಸ್ವಾಮೀಜಿ ಹಾಗೂ ಭಕ್ತರ ನಡುವೆ ಬಹುಕಾಲದಿಂದ ಹೊಗೆಯಾಡುತಿದ್ದ ವಿವಾದ ಇಂದು ಭಕ್ತರು ಹಾಗೂ ಮಠದ ಶಿಷ್ಯರ ಪ್ರತಿಭಟನೆಯ ರೂಪದಲ್ಲಿ ಹೊರಬಂದಿದೆ.
ಬಾಳಕುದ್ರು ಮಠದ ಪೀಠಾಧಿಪತಿಗಳಾಗಿರುವ ಶ್ರೀವಾಸುದೇವ ಸದಾಶಿವ ಆಶ್ರಮ ಮಹಾಸ್ವಾಮೀಜಿ ಅವರು ಶ್ರೀಮಠದ ಉಸ್ತುವಾರಿಯನ್ನು ಶಿಷ್ಯ ವರ್ಗದ ವಿರೋಧ ಈ ದೇಶದ ಕಾನೂನಿಗೆ ವಿರುದ್ಧವಾಗಿ ವಹಿಸಿಕೊಂಡಿದ್ದು, ಅವರು ಕೂಡಲೇ ಪದತ್ಯಾಗ ಮಾಡಬೇಕು ಎಂದು ಇಂದು ಮಠದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಕ್ತರು ಆಗ್ರಹಿಸಿದರು.
‘ಇತಿಹಾಸ ಪ್ರಸಿದ್ಧ ಹಂಗಾರಕಟ್ಟೆ ಶ್ರೀಬಾಳ್ಕುದ್ರು ಮಠವನ್ನು ಅಪವಿತ್ರ ಗೊಳಿಸಬೇಡಿ. ನಿಮ್ಮ ಉಪಸ್ಥಿತಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದ ಪ್ರತಿಭಟನಕಾರರು ಮಠಾಧೀಶರ ಪೀಠತ್ಯಾಗಕ್ಕೆ ಹಕ್ಕೊತ್ತಾಯ ಮಂಡಿಸಿದರು. ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಯಾನೆ ಮಧುಸೂದನ ಭಟ್ಟರು ಕೂಡಲೇ ಶ್ರೀಮಠವನ್ನು ತೊರೆಯಬೇಕು ಎಂದು ಅವರು ಒತ್ತಾಯಿಸಿದರು.
ಮಠದ ಶಿಷ್ಯರು ಹಾಗೂ ಭಕ್ತರು ಬಾಳಕುದ್ರು ಶ್ರೀಮಠ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಶನಿವಾರ ಹಂಗಾರ ಕಟ್ಟೆ ಶ್ರೀ ಬಾಳ್ಕುದ್ರು ಮಠದ ಎದುರು ಶಂಖ-ಜಾಗಟೆ ಬಾರಿಸಿ ಸತ್ಯಾಗ್ರಹ ನಡೆಸಿ ಅಸಮಾಧಾನ ಹೊರಹಾಕಿದರು. ...ಗುರು ಪೀಠ ತ್ಯಜಿಸಿ... ಮಠ ಬಿಟ್ಟು ಶ್ರೀನೃಸಿಂಹ ದೇವರಕೃಪೆಗೆ ಪಾತ್ರರಾಗಿ ಎಂದು ಶ್ರೀಗಳ ಪೀಠ ತ್ಯಾಗಕ್ಕೆ ಒಕ್ಕೊರಲಿನಿಂದ ಆಗ್ರಹಿಸಿದರು.
ಬಾಳಕುದ್ರು ಶ್ರೀಮಠ ಹಿತರಕ್ಷಣಾ ಸಮಿತಿಯ ವಿಘ್ನೇಶ್ವರ ಅಡಿಗ ಮಾತನಾಡಿ, 14 ವರ್ಷದ ಹಿಂದೆ ಸಮಿತಿಯನ್ನು ಸ್ಥಾಪಿಸಲಾಗಿದೆ. ನ್ಯಾಯಾಲಯದ ಆದೇಶ ಪಾಲಿಸದೇ ಶ್ರೀಮಠದಲ್ಲಿ ವೈದಿಕ ಸಂಪ್ರದಾಯ ಅಲ್ಲಗೆಳೆದು, ಶ್ರೀಮಠದ ಪರಂಪರೆಯನ್ನು ಗೌರವಿಸದೆ, ಮೂಲ ವಿಗ್ರಹಗಳನ್ನು ಮೂಲೆಗುಂಪು ಮಾಡಿ, ಮೌಲ್ಯಯುತ ವಸ್ತುಗಳ ಪರಭಾರೆ ಮಾಡಿ, ಅನ್ಯಮಠ ನಿರ್ಮಿಸುವ ಹುನ್ನಾರದಲ್ಲಿ ಶ್ರೀಮಠದ ಮೂಲ ಇತಿಹಾಸವನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿದರು.
ಹಿರಿಯ ಯತಿಗಳನ್ನು ನಿಂದಿಸಿ ಶ್ರೀಮಠವು ಶ್ರೀನರಸಿಂಹ ದೇವರ ಮೂಲ ಸ್ಥಾನವೇ ಅಲ್ಲವೆಂದು, ಅದರಲ್ಲಿ ನಂಬಿಕೆ ಯಿಲ್ಲವೆಂದು ಹೇಳಿ ಸಮಸ್ತ ಶಿಷ್ಯ ವರ್ಗವನ್ನು ನಿಂದಿಸಲಾಗಿದೆ. ಪರಿಚಾರಕರ ಜೊತೆಗೆ ಮಾತನಾಡಿದ ಆಡಿಯೋ ಬಗ್ಗೆಯೂ ಭಕ್ತರಿಗೆ ತೀವ್ರ ಅಸಮಾಧಾನವಿದೆ. ನೈತಿಕತೆಗೆ ದೂರವಾದ ಮಾತುಗಳನ್ನಾಡಿದವರು ಮಠದ ಪೀಠ ತೊರೆಯಬೇಕು. ಇದೆಲ್ಲಾ ಸಮಸ್ಯೆ ವೇಳೆ ಚಾತುರ್ಮಾಸದ ಸೀಮೋಲ್ಲಂಘನೆ ಒಳಿತಲ್ಲ. ಯತಿಗಳ ಸೋಗು ಒಳ್ಳೆಯದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಠದ ಪರಿಚಾರಿಕೆ ಕೆಲಸಕ್ಕೆ ಬಂದ ನಮ್ಮನ್ನೇ ಇಲ್ಲಿಂದ ಏಳಿಸುತ್ತೇವೆ ಎಂದು ನಮಗೆ ಧಮಕಿ ಹಾಕಲಾಗುತ್ತಿದೆ ಎಂದು ರಾಘವೇಂದ್ರ ದೇವಾಡಿಗ ಎಂಬವರು ದೂರಿದರು. ದೇವರ ಕೆಲಸ ಅನುಷ್ಠಾನಗಳು ಸರಿಯಾಗಿ ನಡೆಯು ತ್ತಿಲ್ಲ, ಇದು ಪರಂಪರೆಗೆ ವಿರುದ್ಧ ಎಂದು ಸಮಿತಿ ಕಾರ್ಯದರ್ಶಿ ಮಂಜುನಾಥ ಭಟ್ ಹೇಳಿದರು.
ಶ್ರೀಮಠ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ವೇದಮೂರ್ತಿ ಹೃಷಿಕೇಶ ಬಾಯಿರಿ, ಗೌರವಾಧ್ಯಕ್ಷ ಶಿವರಾಮ ಉಡುಪ, ಉಪಾಧ್ಯಕ್ಷ ವೆಂಕಟರಮಣ ಬಳ್ಳೂಕರಾಯರು, ಸಮಿತಿಯ ಪ್ರಮುಖರಾದ ಬಿ.ಸುರೇಶ ಅಡಿಗ ಬಾಳ್ಕುದ್ರು, ಅನಂತೇಶ ಭಟ್ಟ ನೆಂಪು, ಪ್ರಸನ್ನ ಭಟ್ಟ ಕೋಟ ಮೊದಲಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
‘ಶ್ರೀಗಳು ಮಠ ನಂಬಿಕೊಂಡಿರುವ ಶಿವಳ್ಳಿ ಶಿಷ್ಯ ವೃಂದದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಪರಿಚಾರಕರ ಜೊತೆ ನಡೆದ ಮಾತುಕತೆಯ ಆಡಿಯೋ ಗಮನಕ್ಕೆ ಬಂದ ಬಳಿಕ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅರ್ಹತೆ ಇಲ್ಲದ ವರು ಪೀಠದಲ್ಲಿ ಕೂರಲು ಅಯೋಗ್ಯರು. ಯತಿಯಾಗಿರಲು ಅವರು ಅಸಮರ್ಥರು. ಸ್ವಾಮಿಗಳ ಮಾತಿನ ಆಡಿಯೋದ ಬಗ್ಗೆ ವೈಜ್ಞಾನಿಕ ತನಿಖೆಯಾಗಲಿ.
-ಜಗದೀಶ್ ಐತಾಳ್, ಶ್ರೀಮಠ ಹಿತರಕ್ಷಣಾ ಸಮಿತಿ ಪ್ರಮುಖರು.
ಬಾಳ್ಕುದ್ರು ಮಠಾಧೀಶರ ಸ್ಪಷ್ಟನೆ
ಬಾಳ್ಕುದ್ರು ಮಠದ ಆವರಣದಲ್ಲಿ ಇಂದು ನಡೆದ ಪ್ರತಿಭಟನೆ ಹಾಗೂ ಮಠದೊಳಗಿನ ವಿವಾದದ ಕುರಿತು ಸ್ಪಷ್ಟನೆ ನೀಡಿದ ಶ್ರೀಮಠ ಬಾಳ್ಕುದ್ರು ಮಠಾಧೀಶರಾದ ಶ್ರೀವಾಸುದೇವ ಸದಾಶಿವ ಆಶ್ರಮ ಮಹಾಸ್ವಾಮೀಜಿ, ಮಠದ ಹೆಸರನ್ನು ಕೆಡಿಸುವ ಹುನ್ನಾರವನ್ನು ಸಂಸ್ಥೆಯೊಂದು ಹಿಂದಿನಿಂದಲೂ ಮಾಡುತ್ತಿದೆ. ಎಐ ಮೂಲಕ ಆಡಿಯೋ ಸಿದ್ಧಪಡಿಸಿ ವೈಯಕ್ತಿಕ ತೋಜೋವಧೆ, ಮಠದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬೇರೆ ಪ್ರತಿಷ್ಠಿತ ಮಠಗಳ ನಡುವೆ ನಿಷ್ಠೂರ ತಂದೊಡ್ಡುವ ಕೆಲಸ ಮಾಡಿದ್ದರಿಂದ ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಲಾಗಿತ್ತು.ಬಾಳ್ಕುದ್ರು ಮಠದ ಸಾರ್ವಭೌಮತೆಯಂತೆ, ಯಾರೊಬ್ಬರಿಗೂ ಸೀಮಿತ ವಾಗದಂತೆ ಪರಂಪರಾಗತವಾಗಿ ಬಂದಂತೆ ಎಲ್ಲಾ ಅನುಷ್ಟಾನಗಳು ನಡೆಯುತ್ತಿವೆ. ಮಠದ ಬಗ್ಗೆ ನಡೆಯುತ್ತಿರುವ ಎಲ್ಲಾ ಷಡ್ಯಂತ್ರಗಳ ಬಗ್ಗೆ ಕಾನೂನು ಹೋರಾಟಕ್ಕೆ ಮಠದ ಆಡಳಿತಾಧಿಕಾರಿ, ಕಮಿಟಿ ಅಗತ್ಯಕ್ರಮ ವಹಿಸಲಿದೆ ಎಂದು ಶ್ರೀವಾಸುದೇವ ಸದಾಶಿವ ಆಶ್ರಮ ಮಹಾಸ್ವಾಮೀಜಿ ತಿಳಿಸಿದರು.






