ಉಡುಪಿ ನಗರದ ಅಂಗಡಿ ಮುಂಗಟ್ಟುಗಳ ದೀಪಕ್ಕೆ ಆಕರ್ಷಿತಗೊಂಡ ಸಹಸ್ರಾರು ಗೆದ್ದಲುಗಳ ಹಾರಾಟ

ಉಡುಪಿ: ನಗರದ ಕೆಲವು ಅಂಗಡಿಗಳಲ್ಲಿ ಬೆಳಕಿಗೆ ಆಕರ್ಷಿತಗೊಂಡ ಸಾವಿರಾರು ರೆಕ್ಕೆ ಹೊಂದಿರುವ ಗೆದ್ದಲುಗಳು ಒಂದೇ ಬಾರಿಗೆ ಕಾಣಿಸಿಕೊಂಡ ಘಟನೆ ಗಮನ ಸೆಳೆಯಿತು.
ನಗರದ ಗೀತಾಂಜಲಿ ಸಿಲ್ಕ್ಸ್ ರಸ್ತೆಯ ಇಕ್ಕೆಲಗಳಲ್ಲಿ ರುವ ಎಲ್ಲಾ ಅಂಗಡಿ ಮುಂಗಟ್ಟುಗಳ ವಿದ್ಯುತ್ ದೀಪ ಹಾಗೂ ದಾರಿದೀಪಗಳಿಗೆ ಆಕರ್ಷಿತಗೊಂಡ ಸಾವಿರಾರು ಸಂಖ್ಯೆಯ ಗೆದ್ದಲುಗಳು ಹಾರಾಟ ನಡೆಸುತ್ತಿರುವುದು ಕಂಡು ಬಂತು.
ಮಳೆ ಹಾಗೂ ತೇವಾಂಶದ ವಾತಾವರಣದ ಬಳಿಕ ಗೆದ್ದಲುಗಳ ಕಾಲೋನಿಯಿಂದ ಸಂತಾನೋತ್ಪತ್ತಿ ಹಂತದಲ್ಲಿ ರುವ ರೆಕ್ಕೆಯ ಗೆದ್ದಲುಗಳು ಹೊರಬಂದು ಗುಂಪಾಗಿ ಹಾರಾಡುತ್ತವೆ. ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಬೆಳಕಿನ ಕಡೆಗೆ ಆಕರ್ಷಿತವಾಗುವ ಇವು, ಕೆಲ ಸಮಯದ ಬಳಿಕ ತಮ್ಮ ರೆಕ್ಕೆಗಳನ್ನು ಕಳಚಿಕೊಳ್ಳುತ್ತವೆ.
ಇದರ ಪರಿಣಾಮವಾಗಿ ಬೆಳಕಿನ ಕೆಳಭಾಗದಲ್ಲಿ ಸಾವಿರಾರು ರೆಕ್ಕೆಗಳು ಹಾಗೂ ರೆಕ್ಕೆ ಕಳಚಿಕೊಂಡ ಗೆದ್ದಲುಗಳು ನೆಲದ ಮೇಲೆ ಕಂಡುಬರುತ್ತವೆ. ಹೊಸ ಜೋಡಿಗಳು ಸೂಕ್ತ ಸ್ಥಳವನ್ನು ಹುಡುಕಿ ಹೊಸ ಕಾಲೋನಿ ಸ್ಥಾಪಿಸುವುದು ಈ ನೈಸರ್ಗಿಕ ಪ್ರಕ್ರಿಯೆಯ ಭಾಗವಾಗಿದೆ.
ಮಳೆಗಾಲದಲ್ಲಿ ಇಂತಹ ‘ಟರ್ಮೈಟ್ ಸ್ವಾರ್ಮಿಂಗ್’ ದೃಶ್ಯಗಳು ಕಂಡುಬರುವುದು ಸಾಮಾನ್ಯವಾಗಿದ್ದು, ಇದು ಗೆದ್ದಲುಗಳ ನೈಸರ್ಗಿಕ ಸಂತಾನೋತ್ಪತ್ತಿ ಚಕ್ರದ ಒಂದು ಪ್ರಮುಖ ಹಂತವಾಗಿದೆ ಎಂದು ಕೀಟ ತಜ್ಞರು ತಿಳಿಸಿದ್ದಾರೆ.






