ಉಡುಪಿ: ಹಿರಿಯ ನಾಗರಿಕರಿಗೆ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ

ಉಡುಪಿ, ಸೆ.28: ವಯಸ್ಸು ಕೇವಲ ದೇಹಕ್ಕೆ ಮಾತ್ರ ಮನಸ್ಸಿಗಲ್ಲ ಎಂಬ ಚಿಂತನೆಯೊಂದಿಗೆ ಹಿರಿಯ ನಾಗರಿಕರು ಯಾವುದೇ ಹಿಂಜರಿಕೆ ಇಲ್ಲದೇ ಇಲ್ಲಿನ ಎಲ್ಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಿತಿನ್ ಯಶ್ವಂತ್ ರಾವ್ ಹೇಳಿದ್ದಾರೆ.
ಸೋಮವಾರ ಅಜ್ಜರಕಾಡಿನ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಿರಿಯ ನಾಗರಿಕರ ವೇದಿಕೆ/ ಸಂಸ್ಥೆಗಳು, ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘ, ಉಡುಪಿ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ವೃದ್ಧಾಶ್ರಮಗಳು ಮತ್ತು ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿ 1 ಮತ್ತು 2ರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗೆ ಆಯೋಜಿಸಲಾದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಕೇಂದ್ರ ಪ್ರಾಯೋಜಿತ ಅಟಲ್ ವಯೋ ಅಭ್ಯುದಯ ಯೋಜನೆಯಡಿ ಹಿರಿಯ ನಾಗರಿಕರಿಗಾಗಿ ನೃತ್ಯ, ಕಲೆ, ಏಕಪಾತ್ರಾಭಿನಯ, ಸಂಗೀತ ಥೆರಪಿ ಕಾರ್ಯಕ್ರಮವನ್ನು ಬಕೆಟ್‌ಗೆ ಬಾಲ್ ಎಸೆಯುವ ಮೂಲಕ ಹಾಗೂ ಬಿರುಸಿನ ನಡಿಗೆಗೆ ಚಾಲನೆ ನೀಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಅವರನ್ನು ಗೌರವ-ಕಾಳಜಿಯಿಂದ ನೋಡಿಕೊಳ್ಳುವ ಬಗ್ಗೆ ಈಗಿನ ಯುವಜನತೆ ಅರಿತುಕೊಳ್ಳಬೇಕು. ಮಕ್ಕಳು ತಮ್ಮ ಪೋಷಕರು /ಹಿರಿಯರನ್ನು ವೃದ್ಧಾಶ್ರಮಗಳಿಗೆ ಸೇರಿಸದೇ ತಮ್ಮ ಕುಟುಂಬದಲ್ಲಿ ಬದುಕಲು ಅವಕಾಶ ಮಾಡಿಕೊಡಬೇಕು. ಸಂಧ್ಯಾ ಕಾಲದಲ್ಲಿ ಹಿರಿಯರೊಂದಿಗೆ ಇದ್ದು, ಅವರ ಆಗು-ಹೋಗುಗಳಿಗೆ ಸ್ಪಂದಿಸಬೇಕು ಎಂದರು.
ಹಿರಿಯ ನಾಗರಿಕರ ರಕ್ಷಣೆಗಾಗಿ ಪಾಲಕರ ಪೋಷಕರ ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ 2007ನ್ನು ಜಾರಿಗೆ ತರಲಾಗಿದ್ದು, ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ನ್ಯಾಯಾಲಯದಲ್ಲಿ ಹಿರಿಯ ನಾಗರಿಕರ ವಿರುದ್ಧ ಪ್ರಕರಣ ದಾಖಲಾದಲ್ಲಿ ಅಥವಾ ಹಿರಿಯ ನಾಗರಿಕರು ಯಾವುದೇ ದಾವೆ ಹೂಡಿದ್ದಲ್ಲಿ ಅಂತಹ ಹಿರಿಯ ನಾಗರಿಕರಿಗೆ ಉಚಿತ ಕಾನೂನಿನ ನೆರವನ್ನು ಕಾನೂನು ಸೇವೆಗಳ ಪ್ರಾಧಿಕಾರದಿಂದ ನೀಡಲಾಗು ತ್ತಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ಹಿರಿಯ ನಾಗರಿಕರು ಪಡೆದುಕೊಳ್ಳಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಹಿರಿಯ ನಾಗರಿಕರು ತಮ್ಮ ವಯಸ್ಸನ್ನು ಲೆಕ್ಕಿಸದೇ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಹಿರಿಯ ನಾಗರಿಕರ ಮನೋಚೈತನ್ಯಕ್ಕಾಗಿ ನಡೆಸುವ ಇಂಥ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮಮೂರ್ತಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಅ.1ರ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಎಲ್ಲಾ ಹಿರಿಯ ನಾಗರಿಕರುಗಳಿಗೆ ಒಂದು ದಿನದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಮನಸ್ಸು ನಿಯಂತ್ರಣದಲ್ಲಿರಲು ಕ್ರೀಡೆ ಸಹಕಾರಿಯಾಗಲಿದೆ ಎಂದರು.
ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ಡಾ.ಉದಯ ಕುಮಾರ್ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಹಿರಿಯ ನಾಗರಿಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಕೆ.ಸದಾನಂದ ಹೆಗಡೆ, ಗೌರವಾಧ್ಯಕ್ಷ ಹೆಚ್. ವಿಶ್ವನಾಥ್ ಹೆಗ್ಡೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಎಂ.ನಿರಂಜನ ಭಟ್, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ವಾಸಂತಿ ರಾವ್ ಕೊರಡ್ಕಲ್, ಬಳಕೆದಾರರ ವೇದಿಕೆಯ ಅಧ್ಯಕ್ಷ ಹರಿಕೃಷ್ಣ ಶಿವತ್ತಾಯ, ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಮುರುಳೀಧರ್, ಉಪಸ್ಥಿತರಿದ್ದರು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗೆ ಕ್ರೀಡಾ ವಿಭಾಗದಲ್ಲಿ ಬಿರುಸಿನ ನಡಿಗೆ, ಬಕೆಟ್‌ಗೆ ಬಾಲ್ ಎಸೆಯುವುದು, ಕೇರಂ (ಪುರುಷರಿಗೆ) ಹಾಗೂ ರಂಗೋಲಿ (ಮಹಿಳೆಯರಿಗೆ) ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ಗಾಯನ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳು ನಡೆದವು. ಜಿಲ್ಲೆಯ ಹಿರಿಯ ನಾಗರಿಕರು ಉತ್ಸಾಹದಿಂದ ತಮಗಿಷ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಪ್ರಾರಂಭದಲ್ಲಿ ಬ್ರಹ್ಮಕುಮಾರಿ ಡಿ.ಕೆ ಸುಮಾರಿಂದ ಹಿರಿಯ ನಾಗರಿಕರಿಗೆ ಮಾರ್ಗದರ್ಶಿ ಧ್ಯಾನ, ಗಾಯಕ ಡಾ.ಸಚಿನ್ ಸಾಲ್ಯಾನ್‌ರಿಂದ ಸಂಗೀತ ಚಿಕಿತ್ಸೆ ಕಾರ್ಯಕ್ರಮ ನಡೆದವು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ ಸ್ವಾಗತಿಸಿ, ರೆಡ್‌ಕ್ರಾಸ್ ಗೌರವ ಕಾರ್ಯದರ್ಶಿ ಗಣನಾಥ್ ಎಕ್ಕಾರು ಹಾಗೂ ವಿಶೇಷ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಹೆಚ್ ರವೀಂದ್ರ ಕಾರ್ಯಕ್ರಮ ನಿರೂಪಿಸಿದರುಯ ಇಲಾಖೆಯ ಯೋಜನಾ ಸಹಾಯಕ ಶಿವಾಜಿ ಎ.ಕೆ ವಂದಿಸಿದರು.






