ಕುಂದಾಪುರ | ಜ್ಞಾನೇಶ್ ವಜಾಕ್ಕೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳಿಂದ ಪ್ರತಿಭಟನೆ

ಕುಂದಾಪುರ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಅವರ ಸರ್ವಾಧಿ ಕಾರಿ ಧೋರಣೆ ಖಂಡಿಸಿ ನಾಗರೀಕರ ಮತದಾನದ ಹಕ್ಕಿನ ನಿರಾಕರಣೆ ಮಾಡಿದ್ದಕ್ಕಾಗಿ ಜ್ಞಾನೇಶ್ ರವರನ್ನು ಮುಖ್ಯ ಆಯುಕ್ತರ ಸ್ಥಾನದಿಂದ ವಜಾಗೊಳಿಸಲು ಹಾಗೂ ಬಂಧಿಸಿ ಶಿಕ್ಷೆ ಒಳಪಡಿಸಲು ಒತ್ತಾಯಿಸಿ ಕುಂದಾಪುರದ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಸಂಜೆ ಇಲ್ಲಿನ ಶಾಸ್ತ್ರಿ ಪಾರ್ಕ್ ಬಳಿ ಪ್ರತಿಭಟನೆ ನಡೆಯಿತು.
ಸಹಬಾಳ್ವೆ ಕುಂದಾಪುರದ ಅಧ್ಯಕ್ಷ ರಾಮಕೃಷ್ಣ ಹೇರ್ಳೆ ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಾಗರೀಕರ ಮತದಾನದ ಹಕ್ಕಿನ ನಿರಾಕರಣೆಯು ನಾಗರಿಕರನ್ನೇ ನಾಶ ಮಾಡಿದಂತೆ. ಈ ಅಪರಾಧಕ್ಕಾಗಿ ಮುಖ್ಯ ಆಯುಕ್ತರನ್ನು ವಜಾಗೊಳಿಸಬೇಕು ಎಂದ ಅವರು ಆಯೋಗದ ಉಳಿದ ಇಬ್ಬರು ಆಯುಕ್ತರನ್ನು ಕಡೆಗಣಿಸಿ ಸರ್ವಾಧಿ ಕಾರಿ ಧೋರಣೆ ಅನುಸರಿಸುವುದು ಪ್ರಕ್ರಿಯೆಯಲ್ಲಿ ಕೋಟ್ಯಂತರ ಮತದಾರರನ್ನು ಹೊರಗಿಟ್ಟಿರುವುದು ಖಂಡಿಸಿ ಮತದಾನದ ಹಕ್ಕಿಗಾಗಿ ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮುಖಂಡ ರಾಜು ಬೆಟ್ಟಿನಮನೆ, ಸಾಮಾಜಿಕ ಚಿಂತಕರಾದ ಹಯವದನ ಮೂಡುಸಗ್ರಿ, ಸಿಐಟಿಯು ಮುಖಂಡರಾದ ವಿ. ನರಸಿಂಹ, ಎಚ್. ನರಸಿಂಹ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಹಬಾಳ್ವೆಯ ರಿಯಾಝ್ ಕೊಡಿ, ಮೊಹಮ್ಮದ್ ರಫೀಕ್, ದಸ್ತಗೀರ್, ಆಶಾ ಕರ್ವಾಲೋ, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ, ನಾಗರತ್ನಾ, ಶೋಭಾ ಪಡುಕೊಣೆ, ದಲಿತ ಹಕ್ಕುಗಳ ಸಮಿತಿಯ ನಾಗರತ್ನ, ಡಿವೈಎಫ್ಐ ಸಂಘಟನೆಯ ರಾಘು ದೋಣಿಮನೆ, ಮಂಜು, ಸಿಐಟಿಯು ಮುಖಂಡರಾದ ಸಂತೋಷ ಹೆಮ್ಮಾಡಿ, ರಾಜು ದೇವಾಡಿಗ ಪ್ರಕಾಶ್ ಕೋಣಿ, ಜಿ.ಡಿ ಪಂಜು, ಬಲ್ಕಿಸ್ ಉಪಸ್ಥಿತರಿದ್ದರು.
ಚಂದ್ರಶೇಖರ್ ವಿ. ಸ್ವಾಗತಿಸಿ, ಪ್ರಸ್ತಾವನೆ ಮಾತುಗಳನ್ನಾಡಿದರು.






