ಬೆಳಪು: ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಕಾಪು, ಸೆ.29: ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಸುತ್ತಿರುವ ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯು ತನ್ನ ಸಿಎಸ್‌ಆರ್ ಅಂಗವಾದ ಅದಾನಿ ಫೌಂಡೇಶನ್ ಮೂಲಕ ಬೆಳಪು ಗ್ರಾಪಂ ವ್ಯಾಪ್ತಿಯಲ್ಲಿ ಸಮುದಾಯ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಒಟ್ಟು 20 ಲಕ್ಷ ರೂ. ವೆಚ್ಚದಲ್ಲಿ ಮೂರು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಲಾಯಿತು.
ಪಣಿಯೂರು-ಭಾಸ್ಕರ ಅಮೀನ್ ರಸ್ತೆ ಕಂಕ್ರೀಟೀಕರಣ, ವಾಜಪೇಯಿ ಬಡಾವಣೆಯಲ್ಲಿನ ರಸ್ತೆ ಕಾಂಕ್ರೀಟೀಕರಣ ಹಾಗೂ ಮಿಲಿಟರಿ ಕಾಲೋನಿ ಯಲ್ಲಿನ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗಳಿಗೆ ಅದಾನಿ ಸಮೂಹದ ಕಾರ್ಯ ನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಮತ್ತು ಬೆಳಪು ಗ್ರಾಪಂ ಮಾಜಿ ಅಧ್ಯಕ್ಷ ದೇಪ್ರಸಾದ್ ಶೆಟ್ಟಿ ಜಂಟಿಯಾಗಿ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಕಿಶೋರ್ ಆಳ್ವ, ಬೆಳಪು ದಕ್ಷಿಣಾ ಏಷ್ಯಾದಲ್ಲೆ ಮಾದರಿ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾ ಗಿದ್ದು, ಕಾಪು ತಾಲೂಕಿನ ಪ್ರಮುಖ ಕೈಗಾರಿಕಾ ಕೇಂದ್ರವಾಗಿ ಬೆಳೆಯುತ್ತಿದೆ. ಗ್ರಾಮದಲ್ಲಿ ಹಲವು ಎಂ.ಎಸ್.ಎಂ. ಈ ಘಟಕಗಳು ಹಾಗೂ ಸರಕಾರಿ ಪಾಲಿಟೆಕ್ನಿಕ್ ಸಂಸ್ಥೆ ಕಾರ್ಯನಿರ್ವಸುತ್ತಿದ್ದು, ಬೆಳಪು ಅಭಿವೃದ್ಧಿಯ ಹೊಸ ಹಂತಕ್ಕೆ ಸಾಗುತ್ತಿದೆ ಎಂದು ಹೇಳಿದರು.
ಬೆಳಪು ಗ್ರಾಪಂ ವ್ಯಾಪ್ತಿಯಲ್ಲಿ ಸಮುದಾಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅದಾನಿ ಪವರ್ ಲಿಮಿಟೆಡ್ ಒಟ್ಟು 3 ಕೋಟಿ ರೂ. ಸಿಎಸ್‌ಆರ್ ಅನುದಾನವನ್ನು ಘೋಸಿದ್ದು, ಈವರೆಗೆ ಸುಮಾರು 2.06 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಆಳ್ವ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.






